ನಾಳೆಯಿಂದ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ: ಅಕ್ರಮ ತಡೆಗೆ ವೀಡಿಯೋ ಚಿತ್ರೀಕರಣ, ಮಾಸ್ಕ್‌ ಧರಿಸುವುದು ಕಡ್ಡಾಯ…

 ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜೂನ್‌ 16 ಮತ್ತು 17ರಂದು ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲು ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ ಹೇಳಿದ್ದಾರೆ.
ನಾಳೆಯಿಂದ (ಜೂನ್‌ 16ರಿಂದ) ನಡೆಯುವ ಸಿಇಟಿ ಪರೀಕ್ಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂನ್‌ 16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಜೂನ್‌ 18ರಂದು ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದರು.

ಜೂನ್‌ 16ರಂದು ಬೆಳಿಗ್ಗೆ 10:30 ರಿಂದ 11:50ರ ವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2:30 ರಿಂದ 3:50ರ ವರೆಗೆ ಗಣಿತ ಪರೀಕ್ಷೆಗಳು ನಡೆಯಲಿವೆ. ಜೂ.17 ರಂದು ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. 18ರ ಬೆಳಿಗ್ಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಬೆಂಗಳೂರು, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರುಗಳಲ್ಲಿ ಕನ್ನಡ ಭಾಷಾಪರೀಕ್ಷೆ ನಡೆಯಲಿದ್ದು, ಈ ಸಲ 1,708 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಒಟ್ಟು 2,16,525 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಮತ್ತು ಉತ್ತರಗಳನ್ನು ಇಂಗ್ಲಿಷ್‌ ಹಾಗೂ ಕನ್ನಡ ಭಾಷೆ ಎರಡಲ್ಲೂ ಕೊಡಲಾಗುತ್ತದೆ. 486 ಸಿಇಟಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದ್ದು, 87 ಕೇಂದ್ರಗಳು ಬೆಂಗಳೂರಿನಲ್ಲಿವೆ. ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ಪ್ರತಿಯೊಂದು ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದರು.
ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಸಹಾಯಕ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರನ್ನು ವೀಕ್ಷಕರನ್ನಾಗಿ ನೇಮಿಸಲು ಜಿಲ್ಲಾಧಿಕಾರಿಗಳ ಸೂಚನೆ ನೀಡಲಾಗಿದೆ. ಒಟ್ಟಾರೆ 486 ವೀಕ್ಷಕರು, 972 ವಿಶೇಷ ತಪಾಸಣಾ ದಳದ ಸದಸ್ಯರು, 486 ಪ್ರಶ್ನೆ ಪತ್ರಿಕೆ ಪಾಲಕರು, 9600 ಕೊಠಡಿ ಮೇಲ್ವಿಚಾರಕರು ಮತ್ತು 20 ಸಾವಿರಕ್ಕೂ ಹೆಚ್ಚ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಸಿಇಟಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳುಕೈ ಗಡಿಯಾರ, ಟ್ಯಾಬ್, ಮೊಬೈಲ್, ಕ್ಯಾಲಿಕೇಟರ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು. ಒಎಂಆರ್ ಉತ್ತರ ಪತ್ರಿಕೆಯಲ್ಲಿ ತಮ್ಮ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಶನ್ ಕೋಡ್ ನಮೂದಿಸಬೇಕು.
ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರ (ಅಡ್ಮಿಶನ್ ಟಿಕೆಟ್) ಮತ್ತು ಯಾವುದಾದರೂ ಒಂದು ಸೂಕ್ತ ಗುರುತಿನ ಪತ್ರವನ್ನು ತರಬೇಕು ಹಾಗೂ ಮೊದಲ ಗಂಟೆ ಬಾರಿಸಲಿರುವ ನಿಗದಿತ ಅವಧಿಗಿಂತಲೂ ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕರ ನಿರ್ದೇಶಕಿ ಎಸ್. ರಮ್ಯಾ ಇದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement