ಅಡಕೆ ಬೆಲೆಯ ಅಂದಾಜು ವೆಚ್ಚ ಪರಿಷ್ಕರಣೆಗೆ ಕೇಂದ್ರಕ್ಕೆ ನಿಯೋಗ : ಧಾರಣೆ ಬಗ್ಗೆ ಆತಂಕ ಬೇಡ ಎಂದು ಸಚಿವ ಅರಗ ಜ್ಞಾನೇಂದ್ರ ಅಭಯ

ಬೆಂಗಳೂರು : ಅಡಕೆ ಧಾರಣೆಯ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವರು ಹಾಗೂ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರಗ ಜ್ಞಾನೇಂದ್ರ ಬೆಳೆಗಾರರಿಗೆ ಅಭಯ ನೀಡಿದ್ದಾರೆ.
ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಅಡಕೆ ಬೆಲೆಯ ಅಂದಾಜು ವೆಚ್ಚವನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಲು ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡಲಿದೆ. ಕೇಂದ್ರ ಕೃಷಿ ಸಚಿವರನ್ನು ರಾಜ್ಯ ಟಾಸ್ಕ್ ಫೋರ್ಸ್ ನಿಯೋಗ ಭೇಟಿಯಾಗಿ, ಅಡಕೆ ಉತ್ಪನ್ನ ಅಂದಾಜು ವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡಲು ಮನವರಿಕೆ ಮಾಡಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಮಲೆನಾಡು ಭಾಗದ ಸಾಕಷ್ಟು ರೈತರು ಮತ್ತು ಕಾರ್ಮಿಕ ಕುಟುಂಬಗಳ ಮುಖ್ಯವಾದ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಬೆಳೆಗೆ ಸುಸ್ಥಿರವಾದ ಬೆಲೆಯನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಈ ಕುರಿತು ಅಡಕೆ ಬೆಳೆಗಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ಹಣದುಬ್ಬರ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಡಕೆ ಬೆಳೆ ಉತ್ಪಾದನಾ ವೆಚ್ಚವೂ ಹೆಚ್ಚಿದ್ದು ಪ್ರಸ್ತುತ ಪ್ರತಿ ಕಿಲೋ ಅಡಕೆ ಅಂದಾಜು ವೆಚ್ಚ ರೂಪಾಯಿ 25 ರಷ್ಟಿದ್ದು, ಇದನ್ನು ಸುಮಾರು ಆರು ವರ್ಷಗಳ ಹಿಂದೆ ನಿಗದಿ ಪಡಿಸಲಾಗಿದೆ ಹಾಗೂ ಇದನ್ನು ಪುನಃ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ, ಈ ಹಿಂದೆ ಕೇಂದ್ರ ಸರ್ಕಾರ ದೇಶಿಯ ಅಡಿಕೆ ಉತ್ಪನ್ನ ಅಂದಾಜು ವೆಚ್ಚವನ್ನು ಹೆಚ್ಚಳ ಮಾಡಿದಾಗ, ವಿದೇಶದಿಂದ ಆಮದಾಗುತ್ತಿದ್ದ ಕಡಿಮೆ ಗುಣಮಟ್ಟದ ಅಡಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ವಿದೇಶದಿಂದ ಆಮದಾಗುವ ಅಡಿಕೆ, ಗುಣಮಟ್ಟದಲ್ಲಿ ಅತ್ಯಂತ ನಿಕೃಷ್ಟ ವಾಗಿದ್ದು ದೇಶಿಯ ಅಡಿಕೆ, ಗುಣಮಟ್ಟದಲ್ಲಿ ಅತ್ಯುತ್ಕೃಷ್ಟವಾಗಿದೆ ಎಂದು ಪ್ರಮಾಣೀಕೃತ ವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವರನ್ನು ರಾಜ್ಯ ಟಾಸ್ಕ್ ಫೋರ್ಸ್ ನಿಯೋಗ ಭೇಟಿಯಾಗಿ, ಅಡಕೆ ಉತ್ಪನ್ನ ಅಂದಾಜು ವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡಲು ಮನವರಿಕೆ ಮಾಡಿ ಕೊಡಲಾಗುವುದು, ರೈತರು ಅಡಕೆ ಧಾರಣೆ ಬಗ್ಗೆ ಯಾವುದೇ ಆತಂಕ ಹಾಗೂ ಭಯಪಡುವುದು ಬೇಡ ಎಂದು ಸಚಿವರು ವಿನಂತಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement