ನಾಳೆ ಅಂತಾರಾಷ್ಟ್ರೀಯ ಯೋಗ ದಿನ : ಯೋಗ ಈಗ ಆಧುನಿಕ ಜಗತ್ತಿನ ಯೋಗಾಯೋಗ..ಮನಸ್ಸು-ದೇಹ ಶುದ್ಧೀಕರಣದ ಭಾವ

(ಮೈಸೂರಿನ ಅರಮನೆಯ ಮೈದಾನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್‌ ೨೧ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡುತ್ತಿದ್ದು, ಆ ನಿಮಿತ್ತ ಲೇಖನ)

ಪ್ರತಿವರ್ಷ ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ೧೮೦ಕ್ಕೂ ಹೆಚ್ಚಿನ ರಾಷ್ಟ್ರಗಳು ಆಚರಿಸುತ್ತಿವೆ. ಯೋಗದ ಕುರಿತಾದ ಮಾಹಿತಿ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನಾರೋಗ್ಯದ ಪ್ರಮಾಣ ಕಡಿಮೆ ಮಾಡುವುದು, ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಯೋಗದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದು, ಜಾಗತಿಕ ಸಮನ್ವಯತೆಯನ್ನು ಬಲಪಡಿಸಸುವುದು ಹಾಗೂ ಒತ್ತಡ ರಹಿತ ವಾತಾವರಣದಲ್ಲಿ ಬದುಕಲು ಅಗತ್ಯವಾದ ಸ್ವಯಂ ಅರಿವಿಗಾಗಿ, ಧ್ಯಾನದ ಅಭ್ಯಾಸವನ್ನು ಬೆಳೆಸುವ ಧ್ಯೇಯಗಳೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಯೋಗವು ಪ್ರಾಚೀನ ಅಭ್ಯಾಸವಾಗಿದ್ದು, ಪುರಾತನ ಕಾಲದಿಂದಲೂ, ಇದನ್ನು ಅನುಸರಿಸುತ್ತ ಬರಲಾಗಿದೆ. ಯೋಗ ಮೂಲವನ್ನು ಹುಡುಕಿಕೊಂಡು ಸಾಗಿದಲ್ಲಿ ಅದು ಭಗವಾನ್ ಶಿವನಲ್ಲಿ ಬಂದು ತಲುಪುತ್ತದೆ. ಸಾಕ್ಷಾತ್ ಶಿವನೇ ಆದಿಯೋಗಿಯಾಗಿದ್ದು, ಯೋಗದ ಮೊದಲಗುರು ಎಂಬ ನಂಬಿಕೆ ಭಾರತದಲ್ಲಿದೆ. ಜೊತೆಗೆ ಪ್ರಪಂಚದ ಎಲ್ಲ ಯೋಗಿಗಳಿಗೆ ಶಿವನೇ ಶಿಕ್ಷಕನೆಂದು ನಂಬಲಾಗಿದೆ.
ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದ್ದು, ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುವ ಜೊತೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಒಂದು ಸಮಗ್ರ ವಿಧಾನವಾಗಿದೆ.

ಯೋಗ ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಮತ್ತು ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ಹಾಗೂ ನಮ್ಮ ಜೀವನ ಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಅಳವಡಿಸಿಕೊಳ್ಳಲು ೨೦೧೪ ರ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡಿದ್ದರು. ಪ್ರಸ್ತಾಪವನ್ನು ಒಪ್ಪಿಕೊಂಡ ವಿಶ್ವಸಂಸ್ಥೆ ಜೂನ್ ೨೧ ನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲು ನಿರ್ಣಯ ತೆಗೆದುಕೊಂಡ ತರುವಾಯ ೨೦೧೫ ರಿಂದ ಈ ದಿನವನ್ನು ಆಚರಿಸಲಾಗಿತ್ತಿದೆ. ಈಗ ಯೋಗ ದಿನವು ಒಂದು ಜನಾಂದೋಲನವಾಗಿ ಮರ್ಪಟ್ಟಿದೆ. ಮತ್ತು ಜಗತ್ತಿನ ಎಲ್ಲ ಮೂಲೆಗಳಲ್ಲಿ ಸ್ವೀಕರಿಸಲ್ಪಟ್ಟು ಆಚರಣೆ ಮಾಡಲಾಗುತ್ತಿದೆ.
ವಿಶ್ವ ಯೋಗ ದಿನದ ಲಾಂಛನದಲ್ಲಿ ವ್ಯಕ್ತಿಯ ದೇಹದ ಬಣ್ಣ ನೀಲಿಯಾಗಿದ್ದು ಇದು ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಜೊತೆಗೆ ಕಂದು ಮತ್ತು ಹಸಿರು ಬಣ್ಣದ ಎಲೆಗಳನ್ನು ಚಿತ್ರಿಸಲಾಗಿದ್ದು ಇದು ಪ್ರಕೃತಿ ಮತ್ತು ಸೌರ ಸಕ್ತಿಯ ಮೂಲವನ್ನು ಸಂಕೇತಿಸುತ್ತದೆ. ಇದಲ್ಲದೆ ಲಾಂಛನದ ಕೆಳಭಾಗದಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಎಂದು ಬರೆಯಲಾಗಿದೆ. ಯೋಗದ ಸಹಾಯದಿಂದ ಜನರು ಸಾಮರಸ್ಯ ಮತ್ತು ಶಾಂತಿಯನ್ನು ಸಾಧಿಸುತ್ತಾರೆ ಎಂದು ಇದು ಸೂಚಿಸುತ್ತದೆ.
ಯೋಗವು ಜಗತ್ತಿಗೆ ಭಾರತದಿಂದ ಸಂದ ಒಂದು ಅತ್ಯಮೂಲ್ಯ ಕೊಡುಗೆಯಾಗಿದೆ. ಇದು ದೇಹ ಮತ್ತು ಮನಸ್ಸನ್ನು ಚಿಂತನೆಯೊಂದಿಗೆ ಮತ್ತು ಕಾರ‍್ಯ ಸಫಲತೆಯೊಂದಿಗೆ ಮನುಷ್ಯ- ಪ್ರಕೃತಿಯೊಂದಿಗಿನ ಹೊಂದಾಣಿಕೆಯನ್ನು ಒಟ್ಟಾಗಿರಿಸುತ್ತದೆ. ಯೋಗ ಭಾರತದ ಸಂಸ್ಕೃತಿ ಅಷ್ಟೇ ಅಲ್ಲ. ಸನಾತನ ಕಾಲದಿಂದ ನಮ್ಮ ಹಿರಿಯರು ತಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವ ಸಂಪತ್ತು. ಸಹಸ್ರಾರು ವರ್ಷಗಳ ಹಿಂದೆಯೇ ಈ ಯೋಗದ ಮಹತ್ವವನ್ನು ಅರಿತಿದ್ದ ನಮ್ಮ ಋಷಿ-ಮುನಿಗಳು ಯಾವುದೇ ರೋಗ-ರುಜಿನಗಳಿಲ್ಲದೇ ಶತಾಯುಷಿಗಳಾಗಿ ಬಾಳಿ ಬದುಕಿದ್ದಾರೆ.
ಯೋಗಾಸನಗಳು ಮತ್ತು ಯೋಗ ಸೂತ್ರವು ಪತಂಜಲಿ ಮುನಿಗಳು ಮನುಕುಲಕ್ಕೆ ನೀಡಿದ ಕೊಡುಗೆಯಾಗಿದೆ. ಸಹಸ್ರಾರು ವರ್ಷಗಳ ಹಿಂದೆಯೇ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಬರಬಹುದಾದ ಕಾಯಿಲೆಗಳ ಕುರಿತು ಚಿಂತಿಸಿ ಯೋಗದ ಮೂಲಕ ಪರಿಹಾರವೊದಗಿಸಿ ಕೊಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಇಂದಿನ ದಿನಮಾನಗಳಲ್ಲಿ ಎಲ್ಲಿಗೆ ಹೋದರೂ ತಪ್ಪದ ಒತ್ತಡಮಯ ಜೀವನದಲ್ಲಿ ಜನ ಸರಿಯಾಗಿ ತಮ್ಮ ಹೊಟ್ಟೆಗೆ ತಿನ್ನಲೂ ಆಗದೇ ತಮ್ಮ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸದ ಸ್ಥಿತಿಯಲ್ಲಿದ್ದು ಹಣವೆಂಬ ಮಯಾಮೃಗದ ಬೆನ್ನ ಹಿಂದೆ ಬಿದ್ದಿದ್ದಾರೆ. ಇದರಿಂದ ತಮಗೆ ಗೊತ್ತಿಲ್ಲದಂತೆಯೇ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ಅಂಟಿಸಿಕೊಂಡು ಜೀವನ ನಡೆಸುತ್ತಾ ೬೦-೬೫ ವರ್ಷಗಳಲ್ಲಿಯೇ ಮಾರಣಾಂತಿಕ ವ್ಯಾಧಿಗಳಿಗೆ ತುತ್ತಾಗುತ್ತಿದ್ದಾರೆ. ಜನಿಸುತ್ತಿರುವ ಮಕ್ಕಳು ಅಪೌಷ್ಠಿಕತೆಯಿಂದ, ಯುವಕರು ದೌರ್ಬಲ್ಯತೆಯಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಇಂದು ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ.
ಯೋಗಾಭ್ಯಾಸವನ್ನು ವಿಶ್ವಕ್ಕೆ ಭಾರತವು ನೀಡಿದ ಅದ್ಭುತ ಕೊಡುಗೆ. ಕ್ರಿ.ಪೂ ೩ನೇ ಶತಮಾನಕ್ಕೂ ಹಿಂದಿನ ಇತಿಹಾಸ ಹೊಂದಿರುವ ಯೋಗವು ವ್ಯಕ್ತಿಯ ದೈಹಿಕ, ಮನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗಿದೆ.
ಪ್ರಾಣಾಯಾಮವು ಯೋಗದ ಒಂದು ಭಾಗ. ಇದು ಉಸಿರಾಟ ಮತ್ತು ವಿಶ್ರಾಂತಿಯನ್ನೊಳಗೊಂಡ ಪ್ರಕ್ರಿಯೆಯಾಗಿದ್ದು, ದೇಹದ ಆರೋಗ್ಯಕ್ಕೆ ಇದರಿಂದ ಅಧಿಕ ಲಾಭವಿದೆ. ಪ್ರಾಣಾಯಾಮ ಎನ್ನುವುದು ಪ್ರಾಣ ಮತ್ತು ಆಯಾಮದ ಸಂಗಮವಾಗಿದೆ. ಪ್ರಾಣವೆಂದರೆ ಉಸಿರು ಅಥವಾ ಶಕ್ತಿ ಮತ್ತು ಆಯಾಮವೆಂದರೆ ನಿಯಂತ್ರಣವೆಂದು ಅರ್ಥ. ಪ್ರಾಣಾಯಾಮದಲ್ಲಿ ಅಧಿಕ ಪ್ರಮಾಣದ ಆಮ್ಲಜನಕವು ಶ್ವಾಸಕೋಶಕ್ಕೆ ಒದಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಬೀಳುತ್ತದೆ. ಉಸಿರಾಟದಿಂದ ೫೦೦ ಕ್ಯುಬಿಕ್ ಸೆಂಟಿಮೀಟರ್ ಗಾಳಿಯನ್ನು ಮನುಷ್ಯ ತೆಗೆದುಕೊಳ್ಳುತ್ತಾನೆ. ಆದರೆ ಪ್ರಾಣಾಯಾಮದಲ್ಲಿ ಸುಮಾರು ೩೦೦೦-೪೦೦೦ ಕ್ಯುಬಿಕ್ ಸೆಂಟಿಮೀಟರ್ ಗಾಳಿ ತೆಗೆದುಕೊಳ್ಳುತ್ತಾನೆ. ಸರಿಯಾಗಿ ಪ್ರಾಣಾಯಮ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮವಾಗಿದೆ.
ಯೋಗದಲ್ಲಿ ೮ ಅಂಗಗಳನ್ನು ನಿರ್ದೇಶಿಸಿ ಅದಕ್ಕೊಂದು ವೈಜ್ಞಾನಿಕ ಚೌಕಟ್ಟನ್ನು ನಿರ್ಮಿಸಿಕೊಟ್ಟ ಋಷಿಗಳು ಹೇಳುವಂತೆ ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಪ್ರಾಣಾಯಾಮ, ಪ್ರಾಣವಾಯುವು ಶ್ವಾಸಕೋಶಕ್ಕೆ ಸೇರಿ ಹೃದಯ ಭಾಗದಲ್ಲಿ ಚಲಿಸಿ ಆಮ್ಲಜನಕವನ್ನು ಪೂರೈಸಿ ನಿಯಂತ್ರಿಸುತ್ತದೆ. ಆಹಾರ ಸ್ವೀಕಾರ ಮತ್ತು ನಾಡಿ ಶುದ್ಧೀಕರಣ ಮಾಡುತ್ತದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

• ಪ್ರತಿ ದಿನ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿ ತನ್ನ ಈಗಿರುವ ವಯಸ್ಸಿಗಿಂತ ೫ ವರ್ಷ ಕಡಿಮೆ ವಯಸ್ಸಿನವನಂತೆ ಕಾಣುತ್ತಾನೆ.
• ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಲು ಯೋಗ ಸಹಾಯಕಾರಿ. ವಯಸ್ಸಾದಾಗ ಬೇಗನೆ ಚರ್ಮ ಸುಕ್ಕು ಗಟ್ಟುವುದನ್ನು ಯೋಗದಿಂದ ನಿಯಂತ್ರಿಸಬಹುದಾಗಿದೆ.
• ಸಕಾರಾತ್ಮಕ ಯೋಚನೆಗಳನ್ನು ನಮ್ಮೊಳಗೆ ತೊಂಬಿಸಕೊಳ್ಳಲು ಯೋಗ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
• ಯೋಗದಿಂದ ದೇಹ ಮತ್ತು ಮನಸ್ಸುಗಳೆರಡೂ ಆರೋಗ್ಯವಾಗಿರುತ್ತವೆ.
• ನಿರಂತರ ಯೋಗಾಭ್ಯಾಸದಿಂದ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಂಚಯವಾಗುತ್ತದೆ ಹಾಗೂ ಉಲ್ಲಸಿತರಾಗಿರಲು ಸಹಕರಿಸುತ್ತದೆ.
ಇಂದು ಇಡೀ ವಿಶ್ವವೇ ಯೋಗದ ಮಹತ್ವವನ್ನು ಅರಿತು ಅದಕ್ಕೆ ಮಾನ್ಯತೆ ನೀಡಿದೆ. ಸರ್ವರೋಗಕ್ಕೂ ಯೋಗದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬ ಎಂಬುದೂ ಸಾಬೀತಾಗಿದೆ. ಇತ್ತೀಚಿಗೆ ಯೋಗ ಮಾರ್ಗದ ಮೂಲಕ ಆರೋಗ್ಯವನ್ನು ಹುಡುಕುವವರ ಸಂಖ್ಯೆಯೂ ಅಧಿಕವಾಗುತ್ತಿದೆ.
ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ರಕ್ತದೊತ್ತಡ, ಹೃದಯಕಾಯಿಲೆ, ರಕ್ತನಾಳಗಳಲ್ಲಿನ ತೊಡಕು, ಬೊಜ್ಜು, ದಮ್ಮು, ತೊನ್ನು, ಪಾರ್ಕಿನ್‌ಸನ್ ಕಾಯಿಲ, ನಿದ್ರಾಹೀನತೆ, ತಲೆ ಶೂಲೆ, ಸಂಧಿವಾತ, ಕೀಲು ನೋವು, ಥೈರಾಯ್ಡ್, ಯಕೃತ್ತು ಬೇನೆ, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಬಿಳಿಕಾಮಾಲೆ, ಮಲಬದ್ಧತೆ, ಅಜೀರ್ಣತೆ, ಆಮ್ಲೀಯತೆ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಅಸಂಖ್ಯಾತ ಜನರಿಗೆ ಚಿಕಿತ್ಸೆ ನೀಡುವಲ್ಲಿ ಯೋಗ ಪರಿಣಾಮಕಾರಿಯಾಗಿದೆ.
ಅಂದು ಆಧ್ಯಾತ್ಮಿಕ ಸಾಧನೆಗಾಗಿ ಧ್ಯಾನದತ್ತ ತಮ್ಮ ಗಮನ ಕೇಂದ್ರೀಕರಿಸಲು ನೆರವಾಗಲೆಂದು ಋಷಿಗಳು ಬಳಸುತ್ತಿದ್ದ ಯೋಗಾಭ್ಯಾಸವು ಇಂದು ಸರ್ವರೋಗ ನಿವಾರಕ ವಿಜ್ಞಾನವಾಗಿ ಬೆಳೆಯುತ್ತಿದೆ. ಹಲವಾರು ಸಾಧು-ಸಂತರು, ಸಂಘ-ಸಂಸ್ಥೆಗಳು, ಯೋಗ ತಜ್ಞರು, ಯೋಗವನ್ನು ಜನಪ್ರಿಯಗೊಳಿಸುತ್ತಿದ್ದು, ಪ್ರಸ್ತುತ ವರ್ಷಕ್ಕೆ “ಮಾನವೀಯತೆಗಾಗಿ ಯೋಗ ಎಂಬ ವಿಷಯ ಕುರಿತು” ಜಗತ್ತಿನಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ.
– ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement