ಕುಮಟಾ: ದ್ವಿತೀಯ ಪಿಯುದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಕುಮಟಾ: ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ವಿದ್ಯಾಥಿಗಳ ಪರಿಶ್ರಮ ಅವರ ಪರೀಕ್ಷೆಯಲ್ಲಿ ತಿಳಿಯುತ್ತದೆ. ಉತ್ತಮವಾಗಿ ಅಂಕ ಬಂದಾಗ ಪೊಷಕರಷ್ಟೇ ಅಲ್ಲ ನಾಡನ ಜನರು ಸಂತಸ ಪಡುತ್ತಾರೆ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ ಹೇಳಿದರು.
ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಾಲೂಕಾ ಮಟ್ಟದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಕುಮಟಾ ಕನ್ನಡ ಸಂಘದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಯಟ್ ಉಪನ್ಯಾಸಕಿ ಭಾರತಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಕನ್ನಡ ನಾಡಿಗೆ ಸಂದ ಗೌರವವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಧೈರ್ಯ ಮತ್ತು ಭವಿಷ್ಯಕ್ಕೆ ಮಹತ್ವ ನೀಡಿ ಬದುಕಿನಲ್ಲಿ ಮುನ್ನಡೆಯ ಬೇಕು ಎಂದರು.

ಸರ್ಕಾರಿ ಬೆಣ್ಣೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಧರ ಗೌಡ ಮತ್ತು ಬಾಳಿಗಾ ವಾಣಿಜ್ಯ ವಿದ್ಯಾಲಯದ ರವಿ ಪ್ರಭು ಪಿಯುಸಿ ದ್ವಿತೀಯ ವರ್ಷದಲ್ಲಿ ಕನ್ನಡದಲ್ಲಿ ನೂರಕ್ಕೆ ೧೦೦ ಅಂಕಗಳಿಸಿದ್ದು ಅವರನ್ನು ಬಾಳಿಗಾ ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಮತ್ತು ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ಭಂಡಾರಿ ಶಾಲು ಹೊದೆಸಿ ಸನ್ಮಾನಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಾಳಿಗಾ ಪದವಿ ಪೂರ್ವ ಪ್ರಾಚಾರ್ಯ ಪ್ರೊ.ಎನ್.ಜಿ.ಹೆಗಡೆ ಮಾತನಾಡಿ ಬಾಳಿಗಾ ಕಾಲೇಜಿನ ಇತಿಹಾಸದಲ್ಲಿ ದ್ವಿತೀಯ ಪಿ.ಯು.ಸಿಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದ ರವಿ ಪ್ರಭು ಪ್ರಥಮ ವಿದ್ಯಾರ್ಥಿ. ಕಾಲೇಜಿಗೆ ಮತ್ತು ಕನ್ನಡ ನಾಡಿಗೆ ಕೀರ್ತಿ ತಂದ ಇವರ ಸಾಧನೆ ಮುಂದುವರಿಯಲಿ ಎಂದರು.
ವೇದಿಕೆಯಲ್ಲಿ ಡಿ.ಜೆ.ವಿ.ಎಸ್ ಪ್ರೌಡ ಶಾಲೆಯ ಮುಖ್ಯಾಧ್ಯಾಪಕ ದಯಾನಂದ ದೇಶಭಂಡಾರಿ ಸ್ವಾಗತಿಸಿದರು. ಕನ್ನಡ ಸಂಘದ ನಿವೃತ್ತ ಶಿಕ್ಷಕ ಆರ್.ಎನ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಸಂಘದ ಉಪಾಧ್ಯಕ್ಷ ಬಾಬು ನಾಯ್ಕ, ಡಾ.ಅರವಿಂದ ನಾಯಕ, ಪ್ರೊ.ಹೇಮಾ ಪೈ, ಪ್ರೊ. ಪ್ರಸಿಲ್ಲಾ ಮತ್ತಿತರರು ಉಪಸ್ಥಿತರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement