ಶಿವಸೇನೆಯಲ್ಲಿ ಬಂಡಾಯ?: ಮಹಾರಾಷ್ಟ್ರ ಪರಿಷತ್‌ ಚುನಾವಣೆ ನಂತರ ಯಾರ ಸಂಪರ್ಕಕ್ಕೂ ಸಿಗದ ಸಚಿವ ಏಕನಾಥ್ ಶಿಂಧೆ, ಇತರ 15 ಶಾಸಕರು…!

ಮುಂಬೈ: ವಿಧಾನ ಪರಿಷತ್ತಿನ ಚುನಾವಣೆ ನಂತರ ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, 10-12 ಶಾಸಕರ ಜೊತೆಗೆ ಸೋಮವಾರದಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗಿದ್ದು, ಇದು ಪಕ್ಷದೊಳಗೆ ಬಂಡಾಯದ ವದಂತಿಗಳನ್ನು ಹೆಚ್ಚಿಸಿದೆ. ಶಿವಸೇನೆಯ ಕೆಲವು ಶಾಸಕರ ಅಡ್ಡ ಮತದಾನದ ಆರೋಪದ ನಡುವೆಯೇ ಈ ಬೆಳವಣಿಗೆ ನಡೆದಿದೆ.
‘ಕಾಣೆಯಾದ’ ಶಿವಸೇನೆ ಶಾಸಕರು ಶಿಂಧೆ ಅವರೊಂದಿಗೆ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ ಎಂದು ನಂಬಲಾಗಿದೆ. ಹೋಟೆಲ್ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಂಧೆ ಸೂರತ್‌ನಿಂದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಿಂಧೆ ಅವರಿಗೆ ಪಶ್ಚಿಮ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭದ 20 ಶಾಸಕರ ಬೆಂಬಲವಿದೆ ಎಂದು ಮೂಲಗಳು ತಿಳಿಸಿವೆ.  ಈಗ ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಜೊತೆಗೆ ಶಾಸಕರಾದ ಪ್ರಕಾಶ್ ಸುರ್ವೆ, ಮಹೇಶ ಶಿಂಧೆ, ಸಂಜಯ್ ಶಿಂಧೆ, ಸಂಜಯ್ ಬಂಗಾರ್, ತಾನಾಜಿ ಸಾವಂತ್, ಸಂದೀಪನ್ ಬುಮ್ರೆ, ಅಬ್ದುಲ್ ಸತ್ತಾರ್ ಮೋ, ಜ್ಞಾನೇಶ್ವರ ಚೌಗುಲೆ, ಶಂಭುರಾಜ ದೇಸಾಯಿ ಮೋಸೆಮನೆ, ಭರತ್ ಗೋಗವಾಲೆ, ಸಂಜಯ್ ರಾಥೋಡ್, ಸಂಜಯ್ ರೈಮುಲ್ಕರ್, ಸ್ವತಂತ್ರ ಶಾಸಕ ಚಂದ್ರಕಾಂತ ಪಾಟೀಲ ಹಾಗೂ ಸಂಸದ ಹಾಗ ಏಕನಾಥ್ ಶಿಂಧೆ ಅವರ ಪುತ್ರ ಡಾ ಶ್ರೀಕಾಂತ್ ಶಿಂಧೆ ಇದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. 10 ಎಂಎಲ್‌ಸಿ ಸ್ಥಾನಗಳಿಗೆ ಎಂವಿಎ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸಂಖ್ಯಾಬಲದ ಕೊರತೆಯ ನಡುವೆಯೂ ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಪ್ರಮುಖ ಸುದ್ದಿ :-   ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಶಾಸಕರನ್ನು ಹೊಂದಿದೆ, ಆದರೆ ಅದರ ಅಭ್ಯರ್ಥಿಗಳಿಗೆ ಉಳಿದಿರುವ ಮತಗಳು ಸ್ವತಂತ್ರ ಶಾಸಕರು ಅಥವಾ ಸಣ್ಣ ಪಕ್ಷಗಳಿಂದ ಅಥವಾ ಇತರ ಪಕ್ಷಗಳಿಂದ ಬಂದಿವೆ.
ಚುನಾವಣೆಯಲ್ಲಿ ಗೆದ್ದ ಕೂಡಲೇ, ಬಿಜೆಪಿಯ ವಿಜೇತ ಅಭ್ಯರ್ಥಿ ಪ್ರವೀಣ್ ದಾರೆಕರ್, ನಾವು ತುಂಬಾ ಸಂತೋಷವಾಗಿದ್ದೇವೆ; ಮಹಾರಾಷ್ಟ್ರ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ. ಶಿವಸೇನೆ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ 100% ಅಡ್ಡ ಮತದಾನ ನಡೆದಿದೆ. ಇಲ್ಲದಿದ್ದರೆ ನಮಗೆ ಇಷ್ಟು ಮತಗಳು ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಶಂಕಿತ ಅಡ್ಡ ಮತದಾನದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮಂಗಳವಾರ ಮಧ್ಯಾಹ್ನ ಎಲ್ಲಾ ಪಕ್ಷದ ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ. ಪಕ್ಷದ ಎಲ್ಲಾ ಶಾಸಕರು ಸಭೆಯಲ್ಲಿ ತಪ್ಪದೇ ಹಾಜರಿರಲು ಸೂಚಿಸಲಾಗಿದೆ. ಸುಮಾರು 20 ಶಾಸಕರು ಅಡ್ಡ ಮತದಾನ ಮಾಡಿರುವ ಶಂಕೆ ಇದೆ. ಮುಂಬೈನಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಸಭೆ ನಡೆಯಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement