ಮಂಡ್ಯ : ಮಂಡ್ಯ ನಗರದ ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಶಾಸಕ, ಜೆಡಿಎಸ್ ನಾಯಕ ಎಂ. ಶ್ರೀನಿವಾಸ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.
ಮಂಡ್ಯದ ಉನ್ನತೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಉದ್ಘಾಟನೆ ವೇಳೆ ಶಾಸಕ ಎಂ. ಶ್ರೀನಿವಾಸ ಕೇಂದ್ರದ ಪ್ರಾಂಶುಪಾಲ ನಾಗಾನಂದ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಐಟಿಐ ಕೇಂದ್ರಕ್ಕೆ ಆಗಮಿಸಿದ ಶಾಸಕ ಕೇಂದ್ರವನ್ನು ಉದ್ಘಾಟಿಸಿದರು. ನಂತರ ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಮತ್ತು ನಗರಸಭಾಧ್ಯಕ್ಷ ಪ್ರಯೋಗಾಲಯದ ಒಳಗೆ ತೆರಳಿದದರು, ಆದರೆ ಕಿರಿದಾದ ಜಾಗವಾಗಿದ್ದರಿಂದ ಪ್ರಾಂಶುಪಾಲರು ಮುಂದೆ ಬರಲು ಸಾಧ್ಯವಾಗಲಿಲ್ಲ. ಈ ವೇಳೆ ಕಂಪ್ಯೂಟರ್ ಕೊಠಡಿ ವೀಕ್ಷಣೆ ವೇಳೆ ಮಾಹಿತಿಗಾಗಿ ಪ್ರಾಂಶುಪಾಲರನ್ನು ಹುಡುಕಾಡಿದ್ದಾರೆ.
ತಡವಾಗಿ ಮುಂದೆ ಬಂದಿದ್ದರಿಂದ ಕುಪಿತಗೊಂಡ ಶಾಸಕ ಶ್ರೀನಿವಾಸ ಪ್ರಾಂಶುಪಾಲರಾದ ನಾಗಾನಂದ ಮುಂದೆ ಬರುತ್ತಿದ್ದಂತೆ ಅವರಿಗೆ ಏಟುಕೊಟ್ಟಿದ್ದಾರೆ. ಬಂದ ಅತಿಥಿಗಳಿಗೆ ಇಲ್ಲಿನ ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷಮತೆ ಬಗ್ಗೆ ವಿವರಿಸದ ಪ್ರಾಂಶುಪಾಲರ ಕ್ರಮಕ್ಕೆ ಶಾಸಕ ಕೋಪಗೊಂಡು ಕೈ ಮಾಡಿದ್ದಾರೆ.
ಶಾಸಕರ ದಿಢೀರ್ ಕೋಪದಿಂದ ಒಂದು ಕ್ಷಣ ಗಲಿಬಿಲಿಗೊಂಡ ಪ್ರಾಂಶುಪಾಲರು ನಗುತ್ತಲೇ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಶಾಸಕರು ಮತ್ತು ಅತಿಥಿಗಳು ಕೇಂದ್ರದಲ್ಲಿರುವ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ಪ್ರಾಂಶುಪಾಲರು, ಅಧ್ಯಾಪಕರದಿಂದ ವಿವರಣೆ ಪಡೆದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಈ ಐಟಿಐ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಸುಮಾರು 150 ಕೇಂದ್ರಗಳು ಸ್ಥಾಪನೆಯಾಗಿವೆ. ಈ ಕೇಂದ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಏಕ ಕಾಲಕ್ಕೆ ವರ್ಚುವಲ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ