ಡಾ.ಬಾಳಿಗಾ ಕಾಮರ್ಸ್‌ ಕಾಲೇಜಿನಲ್ಲಿ ʼಕಾಮರ್ಸ್‌ ಫೆಸ್ಟ್’ ಕಾರ್ಯಕ್ರಮ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ತೆರೆದ ಬಾಗಿಲು ಎಂದ ಉದ್ಯಮಿ ಮದನ ನಾಯಕ

ಕುಮಟಾ;ಭಾರತ ಬದಲಾಗುತ್ತಿದೆ. ಇಂದು ವಾಣಿಜ್ಯ ವ್ಯವಹಾರದಲ್ಲಿ ಭಾರತವು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತುದಾರ ಉದ್ಯೋಗಿಗಳನ್ನು ಭಾರತ ನೀಡುತ್ತಿದೆ ಎಂದು ಉದ್ಯಮಿ ಮದನ ನಾಯಕ ಹೇಳಿದರು.
ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ‘ ಫೆಸ್ಟ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವಿದ್ಯಾಲಯವು ಸಮರ್ಥ ಮಾನವ ಸಂಪನ್ಮೂಲ ಬೆಳೆಸುವಲ್ಲಿ ತನ್ನ ಪ್ರಯತ್ನವನ್ನು ಹೆಚ್ಚಿಸಬೇಕಾಗಿದೆ. ಆರ್ಥಿಕ ವಲಯದಲ್ಲಿ ಬದಲಾವಣೆಯಾಗುತ್ತಿದೆ. ಜನರು ಕೃಷಿ ಕ್ಷೇತ್ರವನ್ನು ಬಿಟ್ಟು ಸೇವಾವಲಯದಲ್ಲಿ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಭಾರತವು ಜಗತ್ತಿಗೆ ಉದ್ಯೋಗಾವಕಾಶದಲ್ಲಿ ಹೆಚ್ಚು ಕೊಡುಗೆ ನೀಡುತ್ತಿದೆ. ಸೇವಾವಲಯ, ಕಾರ್ಮಿಕ ವಲಯ,ಸಾಫ್ಟ್‌ವೇರ್‌ ವಲಯ ಇವೇ ಮೊದಲಾದವುಗಳಲ್ಲಿ ಭಾರತದ ಕೊಡುಗೆ ಅಪಾರವಾಗಿದೆ ಎಂದರು.

ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ತೆರೆದ ಬಾಗಿಲಾಗಿದೆ. ವಾಣಿಜ್ಯ ಫೆಸ್ಟ್‌ನಂತಹ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಮಾತನಾಡಿ, ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ ಮಾಡುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೇಗೆಲ್ಲ ಸಹಾಯವಾಗುತ್ತದೆ ಎಂಬುದರ ಬಗ್ಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯಲ್ಲಿಯೇ ಭವಿಷ್ಯದ ತಮ್ಮ ಉದ್ಯೋಗ ಯೋಜನೆ ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಎಸ್.ಜಿ.ಹೆಗಡೆ, ಯುನಿಯನ್ ಕಾರ್ಯಾಧ್ಯಕ್ಷ ಡಾ.ಅರವಿಂದ ನಾಯಕ, ಪ್ರೊ. ಹೇಮಾ ಪೈ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ವಿಕ್ರಮ ಪೂರೋಹಿತ, ರಶ್ಮಿ ನಾಯ್ಕ ಉಪಸ್ಥಿತರಿದ್ದರು.
ಅಮೀಶಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಕ್ಷತಾ ಮತ್ತು ಭಾಗ್ಯ ಕಾರ್ಯಕ್ರಮ ನಿರ್ವಹಿಸಿದರು. ರಚನಾ ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ವಾಣಿಜ್ಯ ಮೇಳ ನಡೆಯಿತು.ವಾಣಿಜ್ಯ ಉತ್ಪನ್ನಗಳ ಮೇಲೆ ವಿವಿಧ ಪ್ರಹಸನ ನಡೆಯಿತು. ಹೆಲ್ಮೆಟ್ ಕುರಿತ ಪ್ರಹಸನ ಪ್ರಥಮ ಸ್ಥಾನ ಗಳಿಸಿತು. ವಿದ್ಯಾರ್ಥಿಗಳ ವಾಣಿಜ್ಯ ಚಟುವಟಿಕೆಗೆ ಪೂರಕವಾದ ಸ್ಟಾಲ್ ಗಳು ಆಕರ್ಷಕವಾಗಿದ್ದವು. ಆಹಾರ ಪದಾರ್ಥ,ಆಟಿಕೆ, ನೈಜ ಭಾರತದ ಉತ್ಪನ್ನಗಳ ವಹಿವಾಟು ನಡೆಯಿತು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement