40% ಕಮಿಷನ್ ಆರೋಪ: ಗುತ್ತಿಗೆದಾರರ ಸಂಘದಿಂದ ಮಾಹಿತಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಬೆಂಗಳೂರು: ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ 40% ಟೆಂಡರ್ ಕಮಿಷನ್ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘಕ್ಕೆ ದೂರವಾಣಿ ಕರೆ ಮಾಡಿದ ಕೇಂದ್ರ ಗೃಹ ಇಲಾಖೆ ಕಾರ್ಯಾಲಯ ಮಾಹಿತಿ ಕೇಳಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ಶುಕ್ರವಾರ ಕೆಂಪಣ್ಣ ಅವರಿಗೆ ಕೇಂದ್ರ ಗೃಹ ಇಲಾಖೆಯಿಂದ ಫೋನ್‌ ಕರೆ ಬಂದಿತ್ತು.

ಬೆಂಗಳೂರಿನ ಕಚೇರಿಗೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು. ಈ ದಾಖಲೆಗಳ ಸಂಗ್ರಹ ಮಾಡಿಕೊಂಡು ಗೃಹ ಸಚಿವಾಲಯ ತಿಳಿಸಿದ ದಿನದಂದು ಅವುಗಳನ್ನು ಕಳಿಸಿಕೊಡಲು ಸಂಘವು ನಿರ್ಧರಿಸಿದೆ. 2021ರ ಜುಲೈ 7ರಂದು ಪ್ರಧಾನಿ ಸಚಿವಾಲಯಕ್ಕೆ 40% ಕಮಿಷನ್ ಕುರಿತು ರಾಜ್ಯ ಗುತ್ತಿಗೆದಾರರ ಸಂಘದಿಂದ ದೂರು ನೀಡಲಾಗಿತ್ತು.
ಶುಕ್ರವಾರ ಕೇಂದ್ರ ಗೃಹ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ರಾಜ್ಯ ಸರ್ಕಾರದ ಬಗ್ಗೆ ಮಾಡಲಾಗಿದ್ದ 40% ಆರೋಪದ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಇಂದು ಅವರ ಬೆಂಗಳೂರು ಕಚೇರಿಗೆ ತೆರಳಿ ಮಾಹಿತಿಯನ್ನು ನೀಡುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸಿದ್ದವು. ಪರಿಣಾಮ ಈ ಆರೋಪ ಸರ್ಕಾರಕ್ಕೂ ಸಾಕಷ್ಟು ಮುಜುಗರ ತಂದಿತ್ತು. ಈ ನಡುವೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧವೂ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣವೂ ಭಾರೀ ಸದ್ದು ಮಾಡಿತ್ತು. ಈ ನಡುವೆ ಕೇಂದ್ರ ಗೃಹ ಇಲಾಖೆಯಿಂದ ಕೆಂಪಣ್ಣ ಅವರಿಗೆ ಕರೆ ಬಂದು ದಾಖಲೆ ನೀಡುವಂತೆ ಕೇಳಿಕೊಂಡಿರುವುದು ಮುಂದಿನ ವಿದ್ಯಮಾನಗಳು ಕುತೂಹಲ ಮೂಡಿಸಿವೆ.

ಪ್ರಮುಖ ಸುದ್ದಿ :-   ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement