ಅನೇಕ ಟ್ವಿಸ್ಟ್‌ಗಳ ನಂತರ ಹೊಸ ಮಹಾರಾಷ್ಟ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಈ ಸರ್ಕಾರಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ನಿರ್ಣಾಯಕವಾಗಲಿದೆ. ಬಿಎಂಸಿಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಆಡಳಿತ ಮೈತ್ರಿಕೂಟ ಅಧಿಕಾರ ಹಿಡಿಯಲು ಸಫಲರಾದರೆ ಇದು ರಾಜ್ಯದ ಬಹಳಷ್ಟು ರಾಜಕೀಯ ಬದಲಾವಣೆಗೆ ಕಾರಣವಾಗಬಹುದು.
ಮಹಾರಾಷ್ಟ್ರದಲ್ಲಿ 12ರಿಂದ 15 ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ನಡೆಯಬೇಕಿದ್ದು, ಅದರ ಜೊತೆಗೆ ಜಿಲ್ಲಾ ಪರಿಷತ್ ಮತ್ತು ನಗರ ಪರಿಷತ್ ಚುನಾವಣೆಗಳುನಡೆಯಬೇಕಿದೆ. ಆದಾಗ್ಯೂ, ಶಿವಸೇನೆಯ ದೃಷ್ಟಿಕೋನದಿಂದ ನೋಡಿದರೆ, ಹಳೆಯ ಪಕ್ಷಕ್ಕೆ ಪುರಸಭೆಯ ಚುನಾವಣೆ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬರುವ ಮೊದಲ ಮುನ್ಸಿಪಲ್ ಚುನಾವಣೆ BMC ಆಗಿದ್ದು, ಇದು 1997 ರಿಂದ ಸೇನೆಯ ನಿಯಂತ್ರಣದಲ್ಲಿದೆ. ಹೀಗಾಗಿ ಶಿವಸೇನೆಗೆ ಇದು ಉಳಿದ ಪಕ್ಷಕ್ಕಿಂತ ಹೆಚ್ಚು ಪ್ರತಿಷ್ಠೆಯಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಈ ಹಿಂದೆ ನಡೆದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿತ್ತು. ಆದಾಗ್ಯೂ, 2017 ರಲ್ಲಿ ಎರಡೂ ಪಕ್ಷಗಳು ಪರಸ್ಪರ ವಿರುದ್ಧ ಹೋರಾಡಿದವು.
ಥಾಣೆ ಎರಡನೇ ಮುನಿಸಿಪಲ್ ಕಾರ್ಪೊರೇಶನ್ ಆಗಿದೆ ಮತ್ತು ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆ ಮೂರನೇ ಸ್ಥಾನದಲ್ಲಿದೆ. ಮೂಲಗಳ ಪ್ರಕಾರ, ಹೊಸದಾಗಿ ನೇಮಕಗೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಥಾಣೆ ಮತ್ತು ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯಲ್ಲಿ ಪ್ರಬಲರಾಗಿದ್ದಾರೆ. ಮೇಲಿನ ಎರಡೂ ನಿಗಮಗಳ ಮೇಲೆ ಸೇನೆಯು ಭದ್ರಕೋಟೆ ಹೊಂದಲು ಬಹುಶಃ ಇದೇ ಅಂಶ ಕಾರಣ ಎಂದು ಹೇಳಲಾಗುತ್ತದೆ.
ಅವಲೋಕನ…
2002ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಉದ್ಧವ್ ಅವರು ಟಿಕೆಟ್ ಹಂಚಿಕೆಯನ್ನು ತಾವೇ ಮಾಡಿದರು ಮತ್ತು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವ ಮನಸ್ಥಿತಿಯಲ್ಲಿಲ್ಲ ಎಂಬುದನ್ನು ಮನಗಂಡ ರಾಜ್ ಠಾಕ್ರೆ ಪಕ್ಷದಿಂದ ದೂರ ಸರಿಯಲು ನಿರ್ಧರಿಸಿದ ಸಮಯ ಅದಾಗಿತ್ತು.
ಆದಾಗ್ಯೂ, ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಶಿವಸೇನೆಯು ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು, ಆದರೆ ವರ್ಷಗಳಲ್ಲಿ ಪಕ್ಷದ ಕಾರ್ಯಕರ್ತರ ಬೇಸ್ ದುರ್ಬಲಗೊಂಡಿತು. ಇದೇ ಸಮಯದಲ್ಲಿ ಬಿಎಂಸಿಯಲ್ಲಿ ಬಿಜೆಪಿಯ ಸಂಖ್ಯೆ ಸುಧಾರಿಸುತ್ತಲೇ ಇದೆ.
2012ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಅನ್ನು ಎದುರಿಸಬೇಕಾಗಿದ್ದ ಶಿವಸೇನೆ ಪ್ರಮುಖ ಸವಾಲನ್ನು ಎದುರಿಸಿತ್ತು. ಒಂದು ದೊಡ್ಡ ಸೋಲಿನಲ್ಲಿ, ಶಿವಸೇನೆ ನಷ್ಟವನ್ನು ಅನುಭವಿಸಿತು ಮತ್ತು ಅವರು ಅಧಿಕಾರದಲ್ಲಿ ಉಳಿಯಲು ಸಹಾಯಕ್ಕಾಗಿ ಬಿಜೆಪಿಯತ್ತ ನೋಡಬೇಕಾಯಿತು. ಶಿವಸೇನೆ-ಬಿಜೆಪಿ ಮೈತ್ರಿಕೂಟವು ರಾಜ್ಯದ ಆಡಳಿತಾರೂಢ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ದೇಶದ ಶ್ರೀಮಂತ ಕಾರ್ಪೊರೇಶನ್ ಬಿಎಂಸಿ ಮತ್ತು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ನಿಯಂತ್ರಣವನ್ನು ಉಳಿಸಿಕೊಂಡಿದೆ.
2017ರಲ್ಲಿ ಪಾಲಿಕೆ ಮಟ್ಟದಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೂ ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಶಿವಸೇನೆಗೆ ಹೋಲಿಸಿದರೆ ಬಿಎಂಸಿಯಲ್ಲಿ 2017ರಲ್ಲಿ ಬಿಜೆಪಿ ಗೆಲುವಿನ ಗ್ರಾಫ್ ಏರಿದೆ. ಬಿಜೆಪಿ 32 ರಿಂದ 82 ಸ್ಥಾನಗಳಿಗೆ ಘಾತೀಯ ಬೆಳವಣಿಗೆ ಕಂಡಿದೆ. ಬಿಜೆಪಿಯಿಂದ ಸವಾಲುಗಳನ್ನು ಎದುರಿಸುತ್ತಿದ್ದರೂ, 2012ರಲ್ಲಿ 75ರಲ್ಲಿ ಗೆದ್ದಿದ್ದ ಶಿವಸೇನೆ 2017ರಲ್ಲಿ ಬಿಎಂಸಿಯ ಒಟ್ಟು 221 ವಾರ್ಡ್‌ಗಳಲ್ಲಿ 84 ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಮತ್ತು ಈ ವಾರ್ಡ್‌ಗಳಲ್ಲಿ ಶಿವಸೇನೆ ಭದ್ರಕೋಟೆಯನ್ನು ಹೊಂದಿದೆ ಎಂದು ನಂಬಲಾಗಿದೆ. ಆದರೆ ಇದೇವೇಳೆ 2012ರಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ 7 ಸ್ಥಾನಕ್ಕೆ ಕುಸಿಯಿತು.
ಮುಂಬರುವ ಚುನಾವಣೆಯಲ್ಲಿ, ಮುಖ್ಯವಾಗಿ ಶಿವಸೇನೆ ಶಾಸಕರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಸರ್ಕಾರ ರಚಿಸಿರುವ ಸಮಯದಲ್ಲಿ ಆ ವಾರ್ಡ್‌ಗಳಲ್ಲಿ, ವಿಶೇಷವಾಗಿ ಭದ್ರಕೋಟೆ ಹೊಂದಿರುವ ಬಿಎಂಸಿಯಲ್ಲಿ ಶಿವಸೇನೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ ಎಂದು ನೋಡಬೇಕು. ಮರಾಠಿಯೇತರ ಮತದಾರರು (ಗುಜರಾತಿಗಳು, ಜೈನರು, ಉತ್ತರ ಭಾರತೀಯರು) ಇನ್ನೂ ತಮ್ಮೊಂದಿಗೆ ಇದ್ದಾರೆ ಎಂದು ಬಿಜೆಪಿ ಭಾವಿಸುತ್ತದೆ. ಮರಾಠಿ ಮತದಾರರು ಶಿವಸೇನೆಯೊಂದಿಗಿದ್ದಾರೆ.
ಶಿವಸೇನೆಯ ಮುಂಬೈ ಘಟಕವು ಪ್ರಬಲವಾಗಿದೆ ಮತ್ತು ಅವರ ಪಕ್ಷಕ್ಕೆ ನಿಷ್ಠವಾಗಿದೆ ಎಂದು ನಂಬಲಾಗಿತ್ತು, ಆದಾಗ್ಯೂ, ಇದು ಪ್ರಮುಖ ತಿರುವುಗಳನ್ನು ಕಂಡಿತು. ಈಗ ದಾದರ್, ಮಾಹಿಮ್, ಕುರ್ಲಾ, ಚಾಂಡಿವಾಲಿ ಶಾಸಕರು ಕೂಡ ಶಿವಸೇನಾ ಪಾಳಯ ತೊರೆದು ಬಂಡಾಯ ಸೇನಾ ಶಾಸಕ ಏಕನಾಥ್ ಶಿಂಧೆ ಅವರಿಗೆ ಬೆಂಬಲ ಸೂಚಿಸಿದರು. ಹೀಗಾಗಿ, ಈ ಎಲ್ಲಾ ನಿರ್ಧಾರಗಳು ಮುಂಬರುವ ಚುನಾವಣೆಯಲ್ಲಿ ಶಿವಸೇನೆಗೆ ದೊಡ್ಡ ಆಘಾತವನ್ನು ನೀಡಬಹುದು.
ಸವಾಲುಗಳು…
ಶಿವಸೇನೆ 90 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದರೆ, ಉದ್ಧವ್ ಠಾಕ್ರೆ ಅವರಿಗೆ ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಅಧಿಕಾರ ಹಿಡಿಯುವುದು ನಿಜವಾಗಿಯೂ ಕಷ್ಟ. ಮುಸ್ಲಿಂ ಮತದಾರರು ಈ ಬಾರಿ ಶಿವಸೇನೆಗೆ ಮತ ಹಾಕುವ ಸಾಧ್ಯತೆ ಇದೆ. ಶಿವಸೇನೆ ತನ್ನ ಮುಖವನ್ನು ಸೋಲಿನಿಂದ ರಕ್ಷಿಸಿಕೊಳ್ಳಲು ಇದು ಒಂದು ಅವಕಾಶವಾಗಲೂಬಹುದು, ಇಲ್ಲದಿದ್ದರೆ ಪಕ್ಷದ ನೆಲೆಯು ಮುಂದಿನ ದಿನಗಳಲ್ಲಿ ಕ್ಷೀಣಿಸುವ ಸಾಧ್ಯತೆಯಿದೆ.
ಥಾಣೆ ಮತ್ತು ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳನ್ನು ಉಳಿಸುವುದು ಶಿವಸೇನೆಗೆ ಮತ್ತೊಂದು ದೊಡ್ಡ ಸವಾಲಾಗಿದೆ. ಬಂಡಾಯ ಶಿವಸೇನೆ ಪಾಳೆಯದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎರಡೂ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದು ನಂಬಲಾಗಿದೆ. ಥಾಣೆ ಮತ್ತು ಕಲ್ಯಾಣ್ ಪ್ರದೇಶಗಳಲ್ಲಿ ಅನೇಕ ಕಾರ್ಪೊರೇಟರ್‌ಗಳು ಮತ್ತು ಪಕ್ಷದ ಕಾರ್ಯಕರ್ತರು ಶಿಂಧೆ ಅವರ ಅನುಯಾಯಿಗಳಾಗಿದ್ದಾರೆ. ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ, ಶಿಂಧೆ ಪಾಳಯ ಈಗಾಗಲೇ ಮೂಲ ಸೇನಾ ಪಾಳಯವನ್ನು ಶೇಕ್ ಮಾಡಿದೆ. ಶಿಂಧೆ ತನ್ನೊಂದಿಗೆ ಹಲವು ಕಾರ್ಪೊರೇಟರ್‌ಗಳು ಮತ್ತು ಪಕ್ಷದ ಮುಖಂಡರನ್ನು ಕರೆತಂದಿದ್ದಾರೆ.
ಮುಂಬರುವ ಅಕ್ಟೋಬರ್-ನವೆಂಬರ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಸಹಾಯದಿಂದ ಶಿಂಧೆ ಆಟಕ್ಕೆ ಟರ್ನ್ ಆಗಬಹುದು ಎಂದು ಹಲವರು ಸೂಚಿಸುತ್ತಾರೆ. ಈಗ, ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಸಮಯದಲ್ಲಿ ಪಕ್ಷದ (ಶಿವಸೇನೆ) ಚಿಹ್ನೆಯ ಬಗ್ಗೆ ಹೋರಾಟ ಪ್ರಾರಂಭವಾಗಲಿದೆ. ಹೀಗಾಗಿ ಬಿಎಂಸಿ ಮತ್ತು ಇತರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಈಗಿನ ಚಿಹ್ನೆ ಯಾವ ಗುಂಪಿಗೆ ಹೋಗುತ್ತದೆ ಎಂಬುದು ಮುಖ್ಯವಾಗುತ್ತದೆ. ಯಾಕೆಂದರೆ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮದೇ ನಿಜವಾದ ಶಿವಸೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪಕ್ಷದ ಚಿಹ್ನೆಗಾಗಿಯೂ ಬಿಗ್ ಫೈಟ್ ನಡೆಯಬಹುದು. ಅದು ಬಿಎಂಸಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು.
ನಿಮ್ಮ ಕಾಮೆಂಟ್ ಬರೆಯಿರಿ