ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ, ಇದಕ್ಕೆಲ್ಲ ಬೆದರವುದಿಲ್ಲ : ಹೈಕೋರ್ಟ್‌ ನ್ಯಾ. ಸಂದೇಶ್‌

ಬೆಂಗಳೂರು: ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳೇ ಕಲೆಕ್ಷನ್ ಸೆಂಟರ್‌ಗಳಾಗಿವೆ ಎಂದು ಈಚೆಗೆ ಆಕ್ರೋಶ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ ಎಂದು ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.
ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ” ಎಂದು ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ವರದಿ ಪ್ರಕಾರ, ವಿಚಾರಣೆ ಆರಂಭದಲ್ಲಿ ಎಸಿಬಿ ಪರ ವಕೀಲ ಪಿ ಎನ್‌ ಮನಮೋಹನ್‌ ಅವರು “ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಭಾಗೀಯ ಪೀಠದ ಮುಂದಿದ್ದು, ಈಗಾಗಲೇ ಆ ಪೀಠಕ್ಕೆ ವರದಿ ಸಲ್ಲಿಸಲಾಗಿದೆ” ಎಂದರು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ ಮಾತ್ರಕ್ಕೆ ಇಲ್ಲಿ ವರದಿ ನೀಡಬಾರದು ಎಂದರ್ಥವೇ? ಕಳೆದ ವಿಚಾರಣೆ ವೇಳೆ ವರದಿ ಸಲ್ಲಿಸುವುದಾಗಿ ನೀವೇ ಭರವಸೆ ನೀಡಿದ್ದಿರಿ. ಇದೀಗ ಬಂದು ಬೇರೆ ರೀತಿ ಹೇಳುತ್ತಿದ್ದೀರಿ. ನೀವು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?” ಎಂದು ಎಸಿಬಿ ಪರ ವಕೀಲರನ್ನು ತೀಕ್ಷ್ಣವಾಗಿ ಪ್ರಶ್ನಿಸಿತು.
ನ್ಯಾಯಾಲಯ ಮೇಲ್ವಿಚಾರಣೆ ನಡೆಸಿದ ನಂತರವೇ ದೊಡ್ಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈಗ ನ್ಯಾಯಾಲಯಕ್ಕೇ ಬೆದರಿಕೆ ಹಾಕುವ ಪರಿಸ್ಥಿತಿ ಉದ್ಭವಿಸಿದೆ. ನನ್ನನ್ನೇ ವರ್ಗಾವಣೆ ಮಾಡುವ ಕುರಿತು ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್‌ಫುಲ್‌ ಆಗಿದ್ದಾರಂತೆ, ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯ ಬಗ್ಗೆಯೂ ಆದೇಶದಲ್ಲಿ ಬರೆಯುತ್ತೇನೆ. ಯಾವುದೇ ರೀತಿಯ ಬೆದರಿಕೆ ಎದುರಿಸಲೂ ಸಿದ್ಧನಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ಯಾರ ಬಗ್ಗೆಯೂ ನನಗೆ ಭಯವಿಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ನ್ಯಾಯಮೂರ್ತಿಗಳು ಆಕ್ರೋಶದಿಂದ ನುಡಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ನ್ಯಾಯಮೂರ್ತಿ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂಪಾಯಿಯಲ್ಲಿ ಬದುಕುವುದಕ್ಕೂ ಗೊತ್ತು. ನಾನು ಸಂವಿಧಾನಕ್ಕೆ ಮಾತ್ರ ಬದ್ಧನಾಗಿದ್ದೇನೆ ಎಂದು ಅವರು ಕಟುವಾಗಿ ಹೇಳಿದರು.
ʼಬಿʼ ರಿಪೋರ್ಟ್‌ ಕುರಿತು ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠವು “ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ? ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು. ಭ್ರಷ್ಟಾಚಾರಿಗಳ ವಿರುದ್ಧ ಶೋಧನಾ ವಾರಂಟ್ ಹೊರಡಿಸಿ, ನಂತರ ಅದನ್ನು ಮುಂದಿಟ್ಟುಕೊಂಡು ವಸೂಲಿ ಮಾಡಲಾಗುತ್ತಿದೆ. ಆದರೆ, ಶೋಧನಾ ವಾರಂಟ್ ಅನ್ನು ಕಾರ್ಯರೂಪಕ್ಕೆ ತರುವುದೇ ಇಲ್ಲ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಬಿದ್ದವರಿಗೂ ಬಿ ರಿಪೋರ್ಟ್ ಹಾಕಲಾಗಿದೆ. ದಾಳಿ ವೇಳೆ ಲಂಚದ ಹಣ ಸಿಕ್ಕ ಪ್ರಕರಣಗಳಲ್ಲೂ ವಿಚಾರಣೆ ನಡೆಸದೆ ಬಿ ವರದಿ ಹಾಕಲು ಹೇಗೆ ಸಾಧ್ಯ ಎಂದು ಪೀಠ ಪ್ರಶ್ನಿಸಿತು.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement