ಕೆಲ ಕಂಟೆಂಟ್‌ಗಳನ್ನು ತೆಗೆದುಹಾಕಲು ಕೇಂದ್ರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಟ್ವಿಟರ್

ಬೆಂಗಳೂರು: ಕೆಲವು ಟ್ವೀಟ್‌ ಕಂಟೆಂಟ್‌ಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್‌ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ.
ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ಟೇಕ್ ಡೌನ್ ನೋಟಿಸ್‌ಗಳನ್ನು ಅನುಸರಿಸಲು ಕೇಂದ್ರವು ಇತ್ತೀಚೆಗೆ ಟ್ವಿಟರ್‌ಗೆ ಕೊನೆಯ ಅವಕಾಶ ನೀಡಿತ್ತು. ಒಂದು ವೇಳೆ ಅಂತಹ ವಿಷಯಗಳನ್ನು ತೆಗೆದು ಹಾಕದಿದ್ದರೆ ಕ್ರಿಮಿನಲ್‌ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಕಳೆದ ವಾರ ಕೇಂದ್ರವು ಕಳುಹಿಸಿದ ನೋಟಿಸ್‌ನಲ್ಲಿ, ಜೂನ್ 6 ಮತ್ತು ಜೂನ್ 9 ರಂದು ಕ್ರಮವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹೊರಡಿಸಿದ ಎರಡು ಟೇಕ್ ಡೌನ್ ಆದೇಶಗಳನ್ನು ಅನುಸರಿಸಲು ವಿಫಲವಾಗಿದೆ ಎಂದು Twitterಗೆ ಎಚ್ಚರಿಕೆ ನೀಡಿತ್ತು. ಟ್ವಿಟರ್ ಉಲ್ಲಂಘನೆ ಮುಂದುವರೆಸಿದರೆ, ಹೊಸ ಐಟಿ ನಿಯಮಗಳ ಅಡಿಯಲ್ಲಿ ಮಧ್ಯವರ್ತಿಯಾಗಿ ತಮ್ಮ ಕಾನೂನು ರಕ್ಷಣೆ ಕಳೆದುಕೊಳ್ಳಬಹುದು ಎಂದು ಕೇಂದ್ರವು ಹೇಳಿದೆ. ಈ ಹಿನ್ನೆಲೆಯಲ್ಲಿ ಅದು ಕೋರ್ಟ್‌ ಮೆಟ್ಟಿಲೇರಿದೆ.

ಇದಕ್ಕೂ ಮುನ್ನ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ನಿಯಮಗಳನ್ನು ಪಾಲಿಸುವಂತೆ ಟ್ವಿಟರ್‌ಗೆ ತಿಳಿಸಿತ್ತು ಮತ್ತು ಜುಲೈ 4 ರ ಗಡುವು ನಿಗದಿಪಡಿಸಿತ್ತು. ಅಂತಿಮ ಸೂಚನೆ ಅನುಸರಿಸಲು ಟ್ವಿಟರ್ ವಿಫಲವಾದರೆ, ಅದು ಮಧ್ಯವರ್ತಿ ಸ್ಥಾನಮಾನ ಕಳೆದುಕೊಳ್ಳಬಹುದು ಎಂದು ವರದಿ ತಿಳಿಸಿದೆ.
ಕೇಂದ್ರ ಹಾಗೂ ಕೆಲ ರಾಜ್ಯ ಸರ್ಕಾರಗಳ ವಿರುದ್ಧ ಟ್ವಿಟರ್‌ ಸಂಘರ್ಷ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಕಳೆದ ವರ್ಷ ಟ್ವಿಟರ್‌ ಇಂಡಿಯಾ ಮುಖ್ಯಸ್ಥ ಮನೀಶ್‌ ಮಹೇಶ್ವರಿ ಅವರಿಗೆ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ನೋಟಿಸ್‌ ನೀಡಿದ್ದರು.
ವಯೋವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಗಡ್ಡ ಬೋಳಿಸಲು ಹೇಳಿ ʼವಂದೇ ಮಾತರಂʼ ಮತ್ತು ʼಜೈ ಶ್ರೀರಾಮ್‌ʼ ಹೆಸರು ಪಠಿಸಲು ಒತ್ತಾಯಿಸಿದ್ದ ವೀಡಿಯೊ ಕುರಿತು ಮಾಡಿದ್ದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ (ಗಾಜಿಯಾಬಾದ್‌ ಪ್ರಕರಣ) ಅವರಿಗೆ ನೋಟಿಸ್‌ ನೀಡಲಾಗಿತ್ತು.
ಆಗ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿ ಮಧ್ಯಂತರ ರಕ್ಷಣೆ ಪಡೆದಿದ್ದರು. ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement