ಉಪರಾಷ್ಟ್ರಪತಿ ಚುನಾವಣೆ: ಮೊದಲ ದಿನವೇ ಐವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ನವದೆಹಲಿ: ಆಗಸ್ಟ್‌ 6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯ ಮೊದಲ ದಿನವಾದ ಮಂಗಳವಾರ ಐವರು ನಾಮಪತ್ರ ಸಲ್ಲಿಸಿದ್ದಾರೆ.
ಜುಲೈ 19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕಡ್ಡಾಯ ದಾಖಲೆ ನೀಡಲು ವಿಫಲವಾದ ಕಾರಣ ಒಬ್ಬ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ತಮಿಳುನಾಡಿನ ಸೇಲಂ ಜಿಲ್ಲೆಯ ಕೆ ಪದ್ಮರಾಜನ್, ಅಹಮದಾಬಾದ್‌ನಿಂದ ಪರೇಶ್‌ಕುಮಾರ್ ನಾನೂಭಾಯಿ ಮುಲಾನಿ, ಬೆಂಗಳೂರಿನ ಹೊಸ್ಮಠ ವಿಜಯಾನಂದ ಮತ್ತು ಆಂಧ್ರಪ್ರದೇಶದಿಂದ ನಾಯ್ಡುಗರಿ ರಾಜಶೇಖರ್ ಶ್ರೀಮುಖಲಿಂಗಂ ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಸಂಸತ್ತಿನ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದವರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನ ಆನಂದ್ ಸಿಂಗ್ ಖುಷ್ವಾಹಾ ಕೂಡ ಒಬ್ಬರು. ಖುಷ್ವಾಹಾ ಅವರ ನಾಮಪತ್ರಗಳನ್ನು ಸ್ವೀಕರಿಸಿದರೂ ಅವರು ₹ 15,000 ಭದ್ರತಾ ಠೇವಣಿ ಸಲ್ಲಿಸಲಿಲ್ಲ. ಜೊತೆಗೆ ವಾಸವಾಗಿರುವ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ನಮೂದಿನ ಪ್ರಮಾಣೀಕೃತ ಪ್ರತಿಯನ್ನು ಸಲ್ಲಿಸಲು ವಿಫಲರಾದ ಕಾರಣ ಇವರಿಬ್ಬರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement