ಪ್ರಚಾರದ ವೇಳೆ ಗುಂಡು ಹಾರಿಸಿ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ

ಟೋಕಿಯೊ: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಚುನಾವಣಾ ಭಾಷಣದ ವೇಳೆ 41 ವರ್ಷದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಶುಕ್ರವಾರಹತ್ಯೆ ಮಾಡಿದ್ದಾನೆ.
ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಅಬೆ ಅವರು ಪಶ್ಚಿಮ ಜಪಾನ್‌ನ ನಾರಾದಲ್ಲಿ ಸಂಸತ್ತಿನ ಚುನಾವಣೆಗಾಗಿ ಪ್ರಚಾರ ಮಾಡುವಾಗ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಅಬೆ ಅವರ ಸ್ಥಿತಿ ಚಿಂತಾಜನಕವಾಗಿದೆ ಮತ್ತು ಅವರನ್ನು ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದರು.
ಅಬೆ ಅವರು ಭಾಷಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವರ ಮೇಲೆ ಹಿಂದಿನಿಂದ ಎರಡು ಸಲ ಗುಂಡು ಹಾರಿಸಲಾಯಿತು. ತುರ್ತು ಚಿಕಿತ್ಸೆಗಾಗಿ ಅವರನ್ನು ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಉಸಿರಾಟ ನಿಂತು ಹೋಗಿತ್ತು ಮತ್ತು ಅವರ ಹೃದಯವು ಸ್ಥಗಿತಗೊಂಡಿತು. ನಂತರ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
67 ವರ್ಷದ ಅಬೆ 2020 ರಲ್ಲಿ ಅನಾರೋಗ್ಯ ಕಾರಣಗಳಿಗಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಮೊದಲು ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆಗಿದ್ದೇನು…?
ಜಪಾನಿನ ಮಾಜಿ ಪ್ರಧಾನಿ 67ರ ಹರೆಯದ ಶಿಂಜೊ ಅಬೆ ಬೆಳಗ್ಗೆ 11:30ರ ಸುಮಾರಿಗೆ ನಾರಾದ ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಶಾಟ್‌ಗನ್‌ನಿಂದ ದಾಳಿ ನಡೆಸಿದ್ದಾನೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ. ಎದೆಗೆ ಗುಂಡು ತಗುಲಿದೆ.
ಗುಂಡು ತಗುಲಿದ ನಂತರ ಅಬೆಗೆ ರಕ್ತಸ್ರಾವವಾಗುತ್ತಿತ್ತು ಮತ್ತು ನಂತರ ಅವರು ಹೃದಯ ಸ್ತಂಭನಕ್ಕೆ ಒಳಗಾದರು ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಪ್ರಿಫೆಕ್ಚರಲ್ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಆಗಲೆ ಅವರ ಅಂಗಾಂಗಗಳು ಯಾವುದೇ ಸ್ಪಂದನೆ ತೋರಿಸುತ್ತಿಲ್ಲ ಎಂದು ಸುದ್ದಿ ವಾಹಿನಿ NHK ವರದಿ ಮಾಡಿತ್ತು.
ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದ 41 ವರ್ಷದ ವ್ಯಕ್ತಿ ಶಂಕಿತನನ್ನು ಭದ್ರತಾ ಸಿಬ್ಬಂದಿ ಘಟನಾ ಸ್ಥಳದಲ್ಲಿ ಕಸ್ಟಡಿಗೆ ತೆಗೆದುಕೊಂಡರು. ಆತನಿಂದ ಪೊಲೀಸರು ಬಂದೂಕನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನಾರಾ ನಿವಾಸಿ ತೆತ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ.
ನಾರಾ ನಿವಾಸಿಯಾದ ಯಮಗಾಮಿ ಅವರು ಜಪಾನಿನ ನೌಕಾಪಡೆ ಎಂದೂ ಕರೆಯಲ್ಪಡುವ ಜಪಾನಿನ ಕಡಲ ಸ್ವಯಂ-ರಕ್ಷಣಾ ಪಡೆಯ ಮಾಜಿ ಸದಸ್ಯ ಎಂದು ಫ್ಯೂಜಿ ಟಿವಿ ವರದಿ ಮಾಡಿದೆ. ಅಬೆಗೆ ಗುಂಡು ಹಾರಿಸಲು ಬಳಸುತ್ತಿದ್ದ ಬಂದೂಕನ್ನು ಆತನೇ ತಯಾರಿಸಿಕೊಂಡಿದ್ದ ಎನ್ನಲಾಗಿದೆ. ಯಮಗಾಮಿ ಅವರು ಅಬೆ ಬಗ್ಗೆ ಅಸಮಾಧಾನ ಹೊಂದಿದ್ದರು ಮತ್ತು ಅವರನ್ನು ಕೊಲ್ಲುವ ಉದ್ದೇಶದಿಂದ ಮಾಜಿ ಪ್ರಧಾನಿಯನ್ನು ಗುರಿಯಾಗಿಸಿ ಗುಂಡು ಹೊಡೆದಿದದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಜಪಾನಿನ ಸುದ್ದಿ ಸಂಸ್ಥೆ NHK ವರದಿ ಮಾಡಿದೆ.

ಶಿಂಜೋ ಅಬೆ
ಶಿಂಜೊ ಅಬೆ ಜಪಾನ್‌ನ ಪ್ರಧಾನ ಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದರು, ಮೊದಲು 2006 ರಿಂದ 2007 ರವರೆಗೆ ಮತ್ತು ಮತ್ತೊಮ್ಮೆ 2012 ರಿಂದ 2020 ರವರೆಗೆ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು.
2006ರಲ್ಲಿ ಪ್ರಧಾನಿಯಾದಾಗ ಮೊದಲು ಅಧಿಕಾರಕ್ಕೆ ಬಂದರು. 52 ನೇ ವಯಸ್ಸಿನಲ್ಲಿ, ಅವರು ಯುದ್ಧಾನಂತರದ ಜಪಾನ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದರು. ಆದಾಗ್ಯೂ, ಲಿಬರಲ್ ಡೆಮಾಕ್ರಟಿಕ್ ಪಕ್ಷವು ಮೇಲ್ಮನೆ ಚುನಾವಣೆಯಲ್ಲಿ ಸೋತಿದ್ದರಿಂದ ಅವರು ಒಂದು ವರ್ಷದ ನಂತರ ರಾಜೀನಾಮೆ ನೀಡಬೇಕಾಯಿತು.
ಐದು ವರ್ಷಗಳ ನಂತರ, ಶಿಂಜೊ ಅಬೆ ನಂತರ 2012 ರ ಕೆಳಮನೆ ಚುನಾವಣೆಯಲ್ಲಿ ತನ್ನ ಪಕ್ಷದ ಎಲ್‌ಡಿಪಿಯನ್ನು ಪ್ರಚಂಡ ವಿಜಯಕ್ಕೆ ಮುನ್ನಡೆಸಿದರು ಮತ್ತು ಮತ್ತೆ ಜಪಾನ್‌ನ ಪ್ರಧಾನಿಯಾದರು.
ಅವರು ದಶಕಗಳಿಂದ ರಾಜಕೀಯದಲ್ಲಿರುವ ಪ್ರಬಲ ರಾಜಕೀಯ ಕುಟುಂಬದಿಂದ ಬಂದವರು. ಅವರ ಅಜ್ಜ 1957 ಮತ್ತು 1960 ರ ನಡುವೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಅಬೆ ಅವರ ತಂದೆ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.

ಪ್ರಮುಖ ಸುದ್ದಿ :-   ನಾವೆಲ್ಲರೂ ಒಂದ ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ನಾನಾ ಪಾಟೇಕರ್ ಮಾತು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement