ಯುವತಿಯಿಂದ ಅತ್ಯಾಚಾರ ಪ್ರಕರಣದ ಬೆದರಿಕೆ: ತೋಟಗಾರಿಕೆ ಅಧಿಕಾರಿಯಿಂದ ದೂರು, ಆತ ನನ್ನ ಗಂಡ ಎಂದ ಯುವತಿ

ಬೆಳಗಾವಿ: ಚನ್ನಪಟ್ಟಣದ ಯುವತಿಯೊಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. ₹ 50 ಲಕ್ಷ ನೀಡದಿದ್ದರೆ ಅತ್ಯಾಚಾರ ಹಾಗೂ ಸುಲಿಗೆ ಮಾಡಿದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ಮಂಗಳವಾರ ದೂರು ದಾಖಲಿಸಿದ್ದಾರೆ.
ತೋಟಗಾರಿಕೆ ಇಲಾಖೆ ಎ.ಡಿ ರಾಜಕುಮಾರ್ ಟಾಕಳೆ ಎಂಬವರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಚನ್ನಪಟ್ಟಣದ ನವ್ಯಶ್ರೀ ಹಾಗೂ ಅವರ ಸ್ನೇಹಿತ ತಿಲಕರಾಜ ಡಿ.ಟಿ. ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ನವ್ಯಶ್ರೀ ಅವರದ್ದು ಎನ್ನಲಾದ ಅತ್ಯಂತ ಖಾಸಗಿತನದ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಅಸ್ತ್ರವಾಗಿ ಇಟ್ಟುಕೊಂಡು ನನ್ನ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2020ರಲ್ಲಿ ಬೆಂಗಳೂರಲ್ಲಿ ನಾನು ಕೆಲಸ ಮಾಡುವಾಗ ನವ್ಯಶ್ರೀ ಎಂಬವರ ಪರಿಚಯವಾಯಿತು. ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಸ್ನೇಹ ಬೆಳೆಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ನನ್ನೊಂದಿಗೆ ಸಲುಗೆ’ ಬೆಳೆಸಿಕೊಂಡರು ಎಂದು ದೂರಿನಲ್ಲಿ ಹೇಳಲಾಗಿದೆ.ಒಂದೂವರೆ ವರ್ಷದ ಪರಿಚಯದಲ್ಲಿ ಬೆಳಗಾವಿಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ  ನಾವು ಸೇರಿದ್ದೆವು  ಎಂದೂ ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
2021ರ ಡಿಸೆಂಬರ್ 24ರಂದು ನವ್ಯಶ್ರೀ ನನಗೆ ಕರೆ ಮಾಡಿ ಬೆದರಿಕೆ ಹಾಕಿದರು. ನವ್ಯಶ್ರೀ ಹಾಗೂ ನಾನು ಆತ್ಮೀಯವಾಗಿ ಇರುವ ವಿಡಿಯೊ ಇಟ್ಟುಕೊಂಡು ಅವರು ಹಾಗೂ ತಿಲಕರಾಜ ಕೂಡ ಬೆದರಿಕೆ ಒಡ್ಡಿದರು. ₹ 50 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನನ್ನ ಪತ್ನಿ, ಸಂಬಂಧಿಕರಿಗೆ ವೀಡಿಯೊ ತೋರಿಸಲಾಗುವುದು ಎಂದು ಹೆದರಿಸಿದ್ದಾರೆ. ಆದ್ದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ರಾಜಕುಮಾರ ಟಾಕಳೆ ನನ್ನ ಗಂಡ
ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ರಾಜಕುಮಾರ ಟಾಕಳೆ ನನ್ನ ಗಂಡ’ ಎಂದು ಚನ್ನಪಟ್ಟಣದ ನವ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ದೂರು ನೀಡಿದ ಕಾರಣ, ಮಂಗಳವಾರ ಬೆಳಗಾವಿಗೆ ಬಂದಿದ್ದ ನವ್ಯಶ್ರೀ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.
ನಾನು 15 ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದೆ. ಮಂಗಳವಾರ ಬೆಳಿಗ್ಗೆ ಮರಳಿದ್ದೇನೆ. ನಾನು ವಿದೇಶಿ ಪ್ರವಾಸದಲ್ಲಿದ್ದಾಗ ಅಶ್ಲೀಲ ವಿಡಿಯೊ ಹರಿಬಿಡಲಾಗಿದೆ. ರಾಜಕುಮಾರ ಟಾಕಳೆ ಜೊತೆಗಿನ ನನ್ನ ಅಶ್ಲೀಲ ವಿಡಿಯೊ ವೈರಲ್ ಮಾಡಲಾಗಿದೆ. ರಾಜಕುಮಾರ ಟಾಕಳೆ ನನ್ನ ಗಂಡ. ಇಬ್ಬರೂ ಮದುವೆ ಆಗಿದ್ದೇವೆ’ ಎಂದು ಹೇಳಿದ್ದಾರೆ.
ರಾಜಕುಮಾರ ಟಾಕಳೆ ನನಗೆ ಮೋಸ ಮಾಡಿ ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ. ನಾನು ಅತ್ಯಾಚಾರ ಮಾಡಿದ ಬೆದರಿಕೆ ಒಡ್ಡಿಲ್ಲ. ಅವರು ನನ್ನ ಗಂಡ. ಎಲ್ಲ ಸಂಗತಿಗಳನ್ನು ಮಾಧ್ಯಮಗಳ ಮುಂದೆಯೂ ಇಡುತ್ತೇನೆ ಎಂದು ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement