ಮಂಗಳೂರು: ದಕ್ಷಿಣ ಕನ್ನಡದ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ಹಾಗೂ ಇತರ ಇಬ್ಬರ ವಿರುದ್ಧ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಶ್ರೀನಿವಾಸ ಗೌಡ ಹಾಗೂ ಇತರ ಇಬ್ಬರ ವಿರುದ್ಧ ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ದೂರು ದಾಖಲಿಸಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರು ಕ್ರಿಮಿನಲ್ ದೂರು ನೀಡಿದ್ದಾರೆ.
ಗುಣಪಾಲ ಕಡಂಬ ಎಂಬವರು ಶ್ರೀನಿವಾಸ ಗೌಡ ಅವರನ್ನು ಬಳಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಉಸೇನ್ ಬೋಲ್ಟ್ ದಾಖಲೆ
ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಮಾನ್ಯತೆ ಪಡೆಯದ, ನಂಬಲರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಹೇಳಲಾಗಿದೆ.
2020ರ ಫೆಬ್ರವರಿ 1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ನಲ್ಲಿ ಶ್ರೀನಿವಾಸ ಗೌಡ ಕ್ರಮಿಸಿದ್ದರು. 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್ನಲ್ಲಿ ಕ್ರಮಿಸಿದ ದಾಖಲೆ ಮುರಿದಿದ್ದರು ಎಂದು ಹೇಳಲಾಗಿತ್ತು. ನಂತರ ಹಲವು ಸಂಸ್ಥೆಗಳು ಶ್ರೀನಿವಾಸ ಗೌಡಗೆ ನೆರವು ನೀಡಿದ್ದವು.


ನಿಮ್ಮ ಕಾಮೆಂಟ್ ಬರೆಯಿರಿ