ದೆಹಲಿ ಪ್ರವಾಸದ ವೇಳೆ ಪಕ್ಷದ ನಾಯಕರು ಪ್ರಸ್ತಾಪಿಸಿದರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ

ಬೆಂಗಳೂರು: ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಜುಲೈ 24 ರಂದು ನವದೆಹಲಿಗೆ ತೆರಳುತ್ತಿದ್ದು, ಎರಡು ದಿನಗಳು ದೆಹಲಿಯಲ್ಲಿ ಉಳಿಯಲಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಪ್ರಸ್ತಾಪಿಸಿದರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿವಿಧ ಇಲಾಖೆಗಳ ನಿಯೋಗದೊಂದಿಗೆ ಜುಲೈ 24 ರಂದು ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಪಶ್ಚಿಮ ಘಟ್ಟದ ಬಫರ್‌ ಝೋನ್‌ ಕುರಿತಾದ ನಿಯೋಗವನ್ನೂ ಕರೆದೊಯ್ಯುತ್ತಿದ್ದೇವೆ. ಜುಲೈ 25 ಮತ್ತು 26ರಂದು ದೆಹಲಿಯಲ್ಲಿರುತ್ತೇನೆ. ಆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮೇಲಿನವರು ಪ್ರಸ್ತಾಪ ಮಾಡಿದರೆ, ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ಬಜೆಟ್‌ನಲ್ಲಿ ಘೋಷಣೆ ಮಾಡಿದ ಕೆಲವು ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಇನ್ನು ಕೆಲವು ಯೋಜನೆಗಳು ಅನುಮೋದನೆ ನೀಡುವ ಹಂತದಲ್ಲಿವೆ. ನಿಗದಿತ ಸಮಯದಲ್ಲಿ ಯೋಜನೆಗಳ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ರಾಜ್ಯದಲ್ಲಿ ಶೇ. 100 ರಷ್ಟು ಜಾರಿಯಾಗಿವೆ. ಕೇಂದ್ರದ ಜನಪರ ಯೋಜನೆಗಳನ್ನು ತಕ್ಷಣ ಜಾರಿಗೆ ಸೂಚಿಸಿ, ವಿಶ್ಲೇಷಣೆ ಮಾಡಿದ್ದೇನೆ. ಪಿ.ಎಂ.ಜೆ.ಎಸ್.ವೈ, ಸ್ವ-ನಿಧಿ ಯೋಜನೆ ಶೀಘ್ರದಲ್ಲಿ ಜಾರಿಯಾಗಬೇಕು. ರೈತ ಸಮ್ಮಾನ ನಿಧಿ ಸೇರಿದಂತೆ ಹಲವಾರು ಯೋಜನೆಗಳು ಈಗಾಗಲೇ ಜಾರಿಯಾಗಿವೆ. ರಾಜ್ಯದಲ್ಲಿ ಡ್ರೋನ್ ಸರ್ವೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಈಶ್ವರಪ್ಪ ಪ್ರಕರಣದಲ್ಲಿ ಇಲಾಖೆಯವರು ಬಿ ರಿಪೋರ್ಟ್ ಹಾಕಿದ್ದಾರೆ. ಅದು ಕೋರ್ಟ್‌ಗೆ ಸಲ್ಲಿಕೆಯಾಗುತ್ತದೆ. ಮಾಜಿ ಹೆಚ್ ವೈ ಮೇಟಿ ಪ್ರಕರಣದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದವರು ಎಫ್ಐಆರ್ ಹಾಕದೆ ಬಿ ರಿಪೋರ್ಟ್ ಹಾಕಿದ್ದರು. ಅದು ಅವರು ಮೊದಲೇ ತೀರ್ಮಾನ ಮಾಡಿಕೊಂಡಿದ್ದಕ್ಕೆ ಗಾಗಾಗಿದೆ. ವಿಡಿಯೋ ಸಾಕ್ಷಿ ಇದ್ದಾಗಲೂ ಎಫ್ಐಆರ್ ಹಾಕಿರಲಿಲ್ಲ ಎನ್ನುವುದು ಡಿ ಕೆ ಶಿವಕುಮಾರ್‌ಗೆ ಮರೆತು ಹೋಗಿದೆ ಎಂದು ಟೀಕಿಸಿದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement