ತೀರ್ಥಯಾತ್ರೆಗೆ ಹೋಗಬೇಕೆಂದು ಬಯಸಿದ್ದ ತಂದೆ ತಾಯಿಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗಿದ ಶ್ರವಣ ಕುಮಾರನ ಕಥೆ ಕೇಳಿದ್ದೇವೆ. ಈಗಲೂ ಇಂತಹ ಶ್ರವಣ ಕುಮಾರ ಇದ್ದಾನೆ ಎಂದರೆ… ತನ್ನ ವಯಸ್ಸಾದ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ.
ಕೊರೋನಾ ಹಿನ್ನೆಲೆ ಎರಡು ವರ್ಷಗಳಿಂದ ಉತ್ತರಾಖಂಡದ ವಾರ್ಷಿಕ ಕನ್ವರ್ ಯಾತ್ರೆ ಜುಲೈ 14ರಂದು ಆರಂಭಗೊಂಡಿದೆ. ಈ ಯಾತ್ರೆಯು ಜುಲೈ 26ರ ವರೆಗೆ ಇರಲಿದೆ. ಈ ಯಾತ್ರೆಗೆ ವ್ಯಕ್ತಿಯೊಬ್ಬರು ತನ್ನ ವೃದ್ಧ ತಂದೆ ತಾಯಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ಸಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಈ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಐಪಿಎಸ್ ಅಧಿಕಾರಿ ಅಶೋಕಕುಮಾರ್, “ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಪೋಷಕರನ್ನು ಅವಹೇಳನ ಮಾಡಲಾಗುತ್ತದೆ, ಅವರನ್ನು ಮನೆಯಿಂದ ಹೊರಹಾಕಲಾಗುತ್ತದೆ ಅಥವಾ ಅವರೊಂದಿಗೆ ವಾಸಿಸಲು ಅನುಮತಿಸುವುದಿಲ್ಲ. ಆದರೆ ಇಂದು ಇದಕ್ಕೆ ವಿರುದ್ಧವಾದ ನೋಟ ಕಂಡುಬಂದಿದೆ. ಲಕ್ಷಗಟ್ಟಲೆ ಶಿವಭಕ್ತರಲ್ಲಿ ಒಬ್ಬ ಶ್ರವಣ ಕುಮಾರನೂ ಇದ್ದಾನೆ, ಅವನು ತನ್ನ ವಯಸ್ಸಾದ ಹೆತ್ತವರೊಂದಿಗೆ ಪಲ್ಲಕ್ಕಿಯಲ್ಲಿ ಕನ್ವರ್ ಯಾತ್ರೆಗೆ ಬಂದಿದ್ದಾನೆ. ನನ್ನ ಗೌರವಗಳು! ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ವೀಡಿಯೊವನ್ನು ಜುಲೈ 19ರಂದು ಹಂಚಿಕೊಳ್ಳಲಾಗಿದ್ದು, ನೂರಾರು ರೀಟ್ವೀಟ್ಗಳು ಆಗಿವೆ. ವಿಡಿಯೋ ನೋಡಿದ ನೆಟ್ಟಿಗರು ಶಿವಭಕ್ತನನ್ನು ಕೊಂಡಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ