ಪುತ್ರನಿಗಾಗಿ ತನ್ನ ರಾಜಕೀಯ ಕರ್ಮಭೂಮಿ ಬಿಟ್ಟುಕೊಡುವ ಮಹತ್ವದ ಘೋಷಣೆ ಮಾಡಿದ ಯಡಿಯೂರಪ್ಪ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ಅವರು  ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದಾರೆ ಹಾಗೂ ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ವಿಜಯೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಶಿಕಾರಿಪುರದಲ್ಲಿ ನಿಲ್ಲುತ್ತಿಲ್ಲ. ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಾರೆ. ಬಹಳ ದೊಡ್ಡ ಅಂತರದಲ್ಲಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಶಿಕಾರಿಪುರ ಜನತೆಯಲ್ಲಿ‌ ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ಎಂದು ಮನವಿ ಮಾಡಿದರು.
ಹಳೆ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಇದೆ. ಆದರೆ ನಾನು ಕ್ಷೇತ್ರ ಖಾಲಿ ಮಾಡುತ್ತಿರುವುದರಿಂದ ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಲಿದ್ದಾರೆ ಎಂದು ತಿಳಿಸಿದರು.

ವಿಜಯೇಂದ್ರ ಪ್ರತಿಕ್ರಿಯೆ
ತಂದೆ ಯಡಿಯೂರಪ್ಪ ಅವರು ತಮಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪುತ್ರ ವಿಜಯೇಂದ್ರ ಅವರು ತಂದೆಯ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ. ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದು ನನ್ನ ಕರ್ತವ್ಯ. ಹಿಂದಿನಿಂದಲೂ ಅದನ್ನು ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಶಿಕಾರಿಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಒತ್ತಡ ಹೇರಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮುಖಂಡರು ಒತ್ತಾಯಿಸಿದ್ದರು. ಕ್ಷೇತ್ರದ ಮುಖಂಡರ ಒತ್ತಾಯದಂತೆ ಇಂದು ತೀರ್ಮಾನ ಪ್ರಕಟಿಸಿದ್ದಾರೆ ಎಂದುಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪಕ್ಷ ಏನು ತೀರ್ಮಾನ ಮಾಡುತ್ತದೆ. ಅದನ್ನು ಅಧರಿಸಿ, ನಾನು ನಿರ್ಧಾರ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ತಂದೆ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಉದ್ಭವಿಸಲ್ಲ. ಯಡಿಯೂರಪ್ಪನವರಿಗೆ ನಿವೃತ್ತಿ ಅನ್ನೋದು ಸಂಬಂಧ ಇಲ್ಲ. ಅವರ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದ ಇಲ್ಲ. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ದಾರೆ. ಮುಂದೆಯೂ ಅವರು ಮಾಡುತ್ತಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಾಗಲೂ ಅವರು ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿದ್ದರು. ಈ ಬಗ್ಗೆ ವಿಪಕ್ಷಗಳಿಗೆ ಸವಾಲು ಕೂಡ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಲಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಡಿ.ಕೆ. ಶಿವಕುಮಾರ ವಿರುದ್ಧ ಎಫ್ ಐಆರ್ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement