ಬಾಬರಿ ಧ್ವಂಸ ಪ್ರಕರಣ: ಅಡ್ವಾಣಿ ಸೇರಿದಂತೆ 32 ಆರೋಪಿಗಳ ಖುಲಾಸೆ ಪ್ರಶ್ನಿಸಿದ ಅರ್ಜಿ ಅಲಹಾಬಾದ್ ಹೈಕೋರ್ಟಿನಲ್ಲಿ ಆಗಸ್ಟ್ 1ರಂದು ವಿಚಾರಣೆ

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ಖುಲಾಸೆಗೊಳಿಸಿದ್ದ ಲಕ್ನೊದ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಅಲಾಹಾಬಾದ್‌ ಹೈಕೋರ್ಟ್‌ ಆಗಸ್ಟ್‌ 1ರಂದು ನಡೆಸಲಿದೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ಬಿಜೆಪಿ ನಾಯಕರಾದ ಮುರುಳಿ ಮನೋಹರ್‌ ಜೋಶಿ, ಉಮಾ ಭಾರತಿ ಮತ್ತು ಇತರ ಹಲವು ನಾಯಕರನ್ನು ವಿಚಾರಣಾಧೀನ ನ್ಯಾಯಾಲಯವು ಖುಲಾಸೆಗೊಳಿಸಿತ್ತು.
ಆಗಸ್ಟ್‌ 1ರಂದು ಮೇಲ್ಮನವಿಯನ್ನು ವಿಚಾರಣೆಗೆ ನಿಗದಿಪಡಿಸುವಂತೆ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಸಿಂಗ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಾರದ ಆರಂಭದಲ್ಲಿ ಹೇಳಿತ್ತು.

ಬಾಬರಿ ಮಸೀದಿಯನ್ನು ಧ್ವಂಸ ಮಾಡಲು ಪಿತೂರಿ ನಡೆಸಲಾಗಿತ್ತು ಎಂದು ತೋರಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಬೂಬ್‌ ಅಹಮದ್‌ ಮತ್ತು ಸಯ್ಯದ್‌ ಅಖ್ಲಾಖ್‌ ಅಹಮದ್‌ ಪ್ರಶ್ನಿಸಿದ್ದಾರೆ.
ನಾವು ಬಾಬರಿ ಮಸೀದಿ ಧ್ವಂಸ ಘಟನೆಗೆ ಸಾಕ್ಷಿಗಳಾಗಿದ್ದೇವೆ. ಆ ಸಂದರ್ಭದಲ್ಲಿ ನಡೆದ ದೊಂಬಿ ಗಲಭೆಗಳಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಮನವಿಯಲ್ಲಿ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಈ ವಿಷಯವನ್ನು ಮೊದಲು ಜುಲೈ 11, 2022 ಕ್ಕೆ ನಿಗದಿಪಡಿಸಲಾಗಿತ್ತು ಆದರೆ ಅರ್ಜಿದಾರರ ಪರ ವಕೀಲರು ಮುಂದೂಡುವಂತೆ ಕೋರಿದ್ದರು. ಪೀಠವು ಆಗಸ್ಟ್‌ 1ರಂದು ಆಲಿಸಲು ಒಪ್ಪಿಕೊಂಡಿತು ಆದರೆ ವಿಚಾರಣೆಯನ್ನು ಇನ್ನು ಮುಂದೆ ಮುಂದೂಡುವುದಿಲ್ಲ ಎಂದು ವಕೀಲರಿಗೆ ಎಚ್ಚರಿಕೆ ನೀಡಿತು.

ಪ್ರಮುಖ ಸುದ್ದಿ :-   ಟ್ರಂಪ್ ಮೆಚ್ಚಿದ ಇಬ್ಬರು ಜಾಗತಿಕ ನಾಯಕರು ಯಾರು ? : ಒಬ್ಬರು ಪ್ರಧಾನಿ ಮೋದಿ, ಮತ್ತೊಬ್ಬರು....?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement