ಟ್ರಂಪ್ ಮೆಚ್ಚಿದ ಇಬ್ಬರು ಜಾಗತಿಕ ನಾಯಕರು ಯಾರು ? : ಒಬ್ಬರು ಪ್ರಧಾನಿ ಮೋದಿ, ಮತ್ತೊಬ್ಬರು….?

ಎವಿಯನ್ (ಫ್ರಾನ್ಸ್) : ಫ್ರಾನ್ಸ್‌ನಲ್ಲಿ ನಡೆದ ಜಿ-7 (G7) ಶೃಂಗಸಭೆಯ ಸಂದರ್ಭದಲ್ಲಿ ಜಾಗತಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಪ್ರಭಾವದ ಕುರಿತು ನಡೆದ ಚರ್ಚೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಾಗತಿಕ ನಾಯಕರಲ್ಲಿ ತಾವು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಇಷ್ಟಪಡುವ ನಾಯಕರ ಪಟ್ಟಿಯಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಟ್ರಂಪ್ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರನ್ನು “ಅತ್ಯಂತ ಕಠಿಣ ವ್ಯಕ್ತಿ” (A very tough cookie) ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಜಿ-7 ಶೃಂಗಸಭೆಯ ನಂತರ ಪ್ರಸಿದ್ಧ ಮಾಧ್ಯಮ ಸಂಸ್ಥೆ ‘ಆಕ್ಸಿಯೋಸ್’ (Axios) ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷರು ವಿಶ್ವ ನಾಯಕರೊಂದಿಗಿನ ತಮ್ಮ ಸಂಬಂಧ ಮತ್ತು ಜಾಗತಿಕ ಅಧಿಕಾರದ ಸಮೀಕರಣಗಳ ಕುರಿತು ಮಾತನಾಡಿದರು.

ಸಂದರ್ಶನದಲ್ಲಿ ನೀವು ಜಗತ್ತಿನ ಯಾವ ನಾಯಕರನ್ನು ಹೆಚ್ಚು ಗೌರವಿಸುತ್ತೀರಿ ಎಂದು ಪ್ರಶ್ನಿಸಿದಾಗ, ಟ್ರಂಪ್ ಅವರು ಭಾರತ ಮತ್ತು ಚೀನಾ ದೇಶಗಳತ್ತ ಬೆರಳು ತೋರಿಸಿದರು. “ಚೀನಾದ ಜಿನ್‌ಪಿಂಗ್ ಕೇವಲ ವ್ಯವಹಾರದ ಬಗ್ಗೆ ಯೋಚಿಸುವ (All business) ನಾಯಕ ಹಾಗೂ ಭಾರತದ ನರೇಂದ್ರ ಮೋದಿ ಒಬ್ಬ ಅತ್ಯಂತ ಕಠಿಣ ಮತ್ತು ದೃಢ ನಿರ್ಧಾರದ ವ್ಯಕ್ತಿ (A very tough cookie),” ಎಂದು ಟ್ರಂಪ್ ಶ್ಲಾಘಿಸಿರುವುದಾಗಿ ಆಕ್ಸಿಯೋಸ್ ವರದಿ ಮಾಡಿದೆ.
ಸುಮಾರು 16 ತಿಂಗಳುಗಳ ಸುದೀರ್ಘ ಬಿಡುವಿನ ನಂತರ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರು ಮುಖಾಮುಖಿ ಭೇಟಿಯಾದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಸುಂಕದ ವಿಚಾರಗಳು, ರಷ್ಯಾದಿಂದ ಭಾರತ ಮಾಡುತ್ತಿರುವ ಇಂಧನ ಖರೀದಿ ಹಾಗೂ ವಲಸೆ ನೀತಿಗಳಂತಹ ಭಿನ್ನಾಭಿಪ್ರಾಯಗಳ ನಡುವೆಯೂ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ಈ ಹೇಳಿಕೆ ಪುಷ್ಟೀಕರಿಸುತ್ತದೆ.

ಪ್ರಮುಖ ಸುದ್ದಿ :-   200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !

ಪುತಿನ್ ಗೈರುಹಾಜರಿಗೆ ಬೇಸರ, ವರ್ಸೈಲ್ಸ್ ಅರಮನೆ ಭೋಜನಕ್ಕೆ ಫಿದಾ!
ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಜಿ-7 ಒಕ್ಕೂಟದಲ್ಲಿ ಇಲ್ಲದಿರುವ ಬಗ್ಗೆ ಟ್ರಂಪ್ ಬೇಸರ ವ್ಯಕ್ತಪಡಿಸಿದರು. ಹಾಗೆಯೇ, ಶೃಂಗಸಭೆಯ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ತಮಗಾಗಿ ಐತಿಹಾಸಿಕ ‘ವರ್ಸೈಲ್ಸ್ ಅರಮನೆ’ಯಲ್ಲಿ ಹಮ್ಮಿಕೊಂಡಿದ್ದ ರಾಜಾತಿಥ್ಯದ ಭೋಜನಕೂಟವನ್ನು ಟ್ರಂಪ್ ನೆನಪಿಸಿಕೊಂಡರು. “ಆ ಭವ್ಯವಾದ ವಾತಾವರಣ ನನ್ನ ದೌರ್ಬಲ್ಯ” ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.
‘ನಾನೇ ಬಾಸ್’: ತಮಗಿರುವ ಅಪಾರ ಅಧಿಕಾರದ ಬಗ್ಗೆ ಹೆಮ್ಮೆ
ಇರಾನ್ ನಡುವಿನ ಉದ್ವಿಗ್ನತೆಯ ನಂತರ ತಮ್ಮ ಅಧಿಕಾರಕ್ಕೆ ಯಾವುದೇ ಮಿತಿಗಳಿಲ್ಲ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಪ್ರಕಟವಾಗಲಿರುವ ಹೊಸ ಪುಸ್ತಕವೊಂದರ ಪ್ರಕಾರ, “ಡೊನಾಲ್ಡ್ ಟ್ರಂಪ್ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ” ಎಂಬ ವಾದವನ್ನು ಸ್ವತಃ ಟ್ರಂಪ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜಿ-7 ನಾಯಕರೆಲ್ಲರೂ ತಾವು ತಮಾಷೆಯಾಗಿ ಹೇಳಿದ “ನಾನೇ ಬಾಸ್” ಎಂಬ ಮಾತನ್ನು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಇಸ್ರೇಲ್ ದೇಶಕ್ಕೆ ನನ್ನ ಮೇಲೆ ಅಪಾರ ಗೌರವವಿದೆ, ನಾನು ಹೇಳಿದಂತೆ ಅವರು ಕೇಳುತ್ತಾರೆ. “ಒಂದು ವೇಳೆ ನಾನೇ ಇಲ್ಲದಿದ್ದರೆ ಇಂದು ಇಸ್ರೇಲ್ ದೇಶವೇ ಅಸ್ತಿತ್ವದಲ್ಲಿರುತ್ತಿರಲಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಜಗತ್ತಿನ ದುರ್ಬಲ ನಾಯಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಅಮೆರಿಕ ಅಧ್ಯಕ್ಷರು ನಿರಾಕರಿಸಿದ್ದಾರೆ.

ಪ್ರಮುಖ ಸುದ್ದಿ :-   ಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement