ಕರ್ನಾಟಕ ಉದ್ಯೋಗ ನೀತಿ 2022-25: ಉದ್ಯೋಗ ಮೂರು ಪಟ್ಟು ಹೆಚ್ಚಳ ನಿರೀಕ್ಷ, ಕನ್ನಡಿಗರಿಗೆ ಆದ್ಯತೆ

ಬೆಂಗಳೂರು: ‘ಕರ್ನಾಟಕ ಉದ್ಯೋಗ ನೀತಿ 2022- 25’ ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎಲ್ಲ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೇ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ 2.5 ರಿಂದ ಶೇ 3 ರಷ್ಟು ಆಗಲಿದೆ. ಕಂಪನಿಗಳಿಂದ ಕೌಶಲ ತರಬೇತಿ ಸಂಸ್ಥೆ ಸ್ಥಾಪನೆಗೆ ಪ್ರೋತ್ಸಾಹಕಗಳನ್ನು ನೀಡಬೇಕು. ರಾಜ್ಯದಲ್ಲಿ ಉದ್ಯೋಗದ ಡೇಟಾಬೇಸ್‌ ಅನ್ನು ರಚಿಸಿ, ನಿರ್ವಹಿಸಬೇಕು ಎಂಬ ಅಂಶವನ್ನೂ ನೀತಿಯಲ್ಲಿ ಸೇರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು
ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆಯ ಪ್ರಮಾಣದ ಆಧಾರದ ಮೇಲೆ ಮಧ್ಯಮ, ಬೃಹತ್‌, ಅಲ್ಟ್ರಾ ಮೆಗಾ ಮತ್ತು ಸೂಪರ್‌ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಲಾಗಿದೆ. ಹೂಡಿಕೆ ವಿಸ್ತರಣೆಯ ಸಂದರ್ಭದಲ್ಲಿ ಹೂಡಿಕೆ ಮೊತ್ತದ ಆಧಾರದಲ್ಲಿ ಹೆಚ್ಚುವರಿಯಾಗಿ ಎಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕು ಎಂಬ ಸಂಖ್ಯೆಗಳನ್ನೂ ನೀತಿಯಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.
ಕನ್ನಡಿಗರು ಅಥವಾ ಸ್ಥಳೀಯರಿಗೆ ಎ,ಬಿ,ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಉದ್ಯೋಗ ನೀಡಬೇಕು. ಹಿಂದೆ ಕೇವಲ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇನ್ಮುಂದೆ ಎ ಮತ್ತು ಬಿ ದರ್ಜೆಗಳ ಉದ್ಯೋಗ ನೀಡುವುದನ್ನೂ ಕಡ್ಡಾಯ ಮಾಡಲಾಗಿದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಉದ್ಯೋಗ ಸೃಷ್ಟಿಯ ಪ್ರಮಾಣ: ‘ಮಧ್ಯಮ’ ಗಾತ್ರದ ಉದ್ಯಮಗಳು ಪ್ರತಿ ₹10 ಕೋಟಿ ಹೂಡಿಕೆಯ ಮೇಲೆ ಈಗ 10 ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಮೊದಲು ಏಳು ಇತ್ತು. ‘ಬೃಹತ್‌ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗದ ಮಿತಿಯನ್ನು 50 ರಿಂದ 60 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಅವರು ಸಚಿವ ಮಾಧುಸ್ವಾಮಿ ಹೇಳಿದರು.
‘ಮೆಗಾ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗಗಳ ಮಿತಿಯನ್ನು 200 ರಿಂದ 260 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ಉದ್ಯೋಗದ ಅಗತ್ಯತೆಯನ್ನು ಪ್ರತಿ ₹50 ಕೋಟಿ ಹೂಡಿಕೆಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಅಲ್ಟ್ರಾ ಮೆಗಾ ಉದ್ಯಮ’ಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 400 ರಿಂದ 510 ಕ್ಕೆ ಹೆಚ್ಚಿಸಲಾಗಿದೆ. ಇಲ್ಲೂ ಕೂಡ ಪ್ರತಿ ₹50 ಕೋಟಿ ಹೂಡಿಕೆಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ‘ಸೂಪರ್‌ ಮೆಗಾ’ ಉದ್ಯಮಗಳಲ್ಲಿ ಕನಿಷ್ಠ ಉದ್ಯೋಗ ಮಿತಿಯನ್ನು 750 ರಿಂದ 1,000 ಹೆಚ್ಚಿಸಲಾಗಿದೆ. ಪ್ರತಿ ₹50 ಕೋಟಿ ಹೂಡಿಕೆಗೆ 50 ಉದ್ಯೋಗಗಳನ್ನು ಸೃಷ್ಟಿಸಬೇಕು. ಹೆಚ್ಚುವರಿಯಾಗಿ ಸೃಷ್ಟಿಸುವ ಉದ್ಯೋಗಗಳನ್ನು ಕನ್ನಡಿಗರಿಗೆ /ಸ್ಥಳೀಯರಿಗೆ ನೀಡಬೇಕು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

ಮುಖ್ಯಾಂಶಗಳು….

* ಉದ್ಯೋಗಕ್ಕಾಗಿ ನಿರಂತರ ಬೇಡಿಕೆ ಮತ್ತು ರಾಜ್ಯದಲ್ಲಿ ನುರಿತ ಕಾರ್ಮಿಕ ಬಲದ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಾಮುಖ್ಯತೆ ನೀಡಲಾಗಿದೆ. ಈ ನೀತಿಯು ಉದ್ಯೋಗ ಸೃಷ್ಟಿಯ ಬೇಡಿಕೆ ಮತ್ತು ಪೂರೈಕೆಯ ಉಪಕ್ರಮಗಳನ್ನು ಸೂಚಿಸುತ್ತದೆ.

*ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆಗಳ ಕ್ಲಸ್ಟರ್‌, ಬೀದರ್‌ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್‌, ಹುಬ್ಬಳ್ಳಿಯಲ್ಲಿ ಗ್ರಾಹಕ ಬಾಳಿಕೆ ಬರುವ ಸರಕುಗಳು ಮತ್ತು ಉಪಕರಣಗಳ ಕ್ಲಸ್ಟರ್‌, ಧಾರವಾಡ ಜಿಲ್ಲೆಯಲ್ಲಿ ಫಾಸ್ಟ್‌ ಮೂವಿಂಗ್‌ ಮತ್ತು ಗ್ರಾಹಕ ಸರಕುಗಳ ಕ್ಲಸ್ಟರ್‌ಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ.
* ಹೆಚ್ಚು ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಾದ ಜವಳಿ, ಆಟಿಕೆ ತಯಾರಿಕೆ, ಎಫ್‌ಎಂಸಿಜಿ, ಚರ್ಮ ಉತ್ಪನ್ನಗಳು, ಆಹಾರ ಸಂಸ್ಕರಣೆ ಮತ್ತು ಆಭರಣ ಕ್ಷೇತ್ರಗಳಿಗೆ ಒತ್ತು ನೀಡಿ, ಹೂಡಿಕೆದಾರರನ್ನು ಆಕರ್ಷಿಸಲಾಗುತ್ತದೆ.

*ಹೆಚ್ಚು ಉದ್ಯೋಗ ಸೃಷ್ಟಿಸುವ ಜವಳಿ ಮತ್ತು ಗಾರ್ವೆಂಟ್ ನೀತಿ 2019-24ನ್ನು ತಿದ್ದುಪಡಿ ಮಾಡಿ ಪ್ರೋತ್ಸಾಹಗಳ ಮೇಲಿನ ಮಿತಿ ತೆಗೆದು ಹಾಕಲಾಗಿದೆ.
*ಹೆಚ್ಚುವರಿ ವಹಿವಾಟಿಗೆ ಪೂರಕವಾಗಿ ಶೇ.0.75 ರಷ್ಟು ಸಹಾಯಧನ ನೀಡುವ ಬಂಡವಾಳ ಹೂಡಿಕೆಗೆ 3.5 ಪಟ್ಟು ಹೆಚ್ಚು ಉದ್ಯೋಗ ಕೊಡಬೇಕು.
* ಹೆಚ್ಚುವರಿ ವಹಿವಾಟಿಗೆ ಪೂರಕವಾಗಿ ಶೆ.0.50 ರಷ್ಟು ಸಹಾಯಧನ ನೀಡುವ ಬಂಡವಾಳ ಹೂಡಿಕೆಗೆ 2.5 ಪಟ್ಟು ಹೆಚ್ಚು ಉದ್ಯೋಗ ಕೊಡಬೇಕು.
* ಚರ್ಮ ಉತ್ಪನ್ನ ಹಾಗೂ ಆಹಾರ ಸಂಸ್ಕರಣೆ ಮತ್ತು ಜುವೆಲ್ಲರಿ ಉದ್ಯಮಗಳಿಗೆ ಪ್ರಸ್ತಾವನೆಗಳನ್ನು ಆಧರಿಸಿ ಹೆಚ್ಚುವರಿ ಪ್ರೋತ್ಸಾಹ ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ತಿರಸ್ಕರಿಸಲು ಸಂಪುಟ ತಿರಸ್ಕಾರ
ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಅಧಿಸೂಚನೆ ಜಾರಿಯಾದರೆ ಪಶ್ಚಿಮಘಟ್ಟ ಪ್ರದೇಶದ ಜನತೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಸರ್ಕಾರ ಸ್ಪಷ್ಟ ನಿಲುವು ತಳೆದಿದೆ. ಹೀಗಾಗಿ, ಅಧಿಸೂಚನೆ ಒಪ್ಪಲು ಸಾಧ್ಯವಿಲ್ಲ ಮತ್ತು ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ ಎಂಬ ಚರ್ಚೆಯೂ ನಡೆಯಿತು. ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement