ಬಿಜೆಪಿ ಮುಖಂಡ ಪ್ರವೀಣ ಹತ್ಯೆ: ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಅವರ ಹಂತಕರ ಪತ್ತೆಗೆ ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ. ಅಲ್ಲದೆ, ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಪ್ರವೀಣ ಅವರ ಹತ್ಯೆ ಮಾಡಲಾಗಿತ್ತು. ಬೈಕ್ ನಲ್ಲಿ ಬಂದ ತಂಡದವರು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿ ಆಗಿದ್ದಾರೆ. ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರವೀಣ ಅವರು ಬೆಳ್ಳಾರೆಯಲ್ಲಿ ಅಕ್ಷಯ ಕೋಳಿ ಅಂಗಡಿ ನಡೆಸುತ್ತಿದ್ದರು. ಬಜರಂಗದಳವೂ ಸೇರಿದಂತೆ ಸಂಘ ಪರಿವಾರದ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.
ಪ್ರವೀಣ್ ಹತ್ಯೆ ಪ್ರಕರಣದಿಂದಾಗಿ ದಕ್ಷಿಣ ಕನ್ನಡ‌ ಜಿಲ್ಲೆಯ ಸುಳ್ಯ ಹಾಗೂ ಪುತ್ತೂರುಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪುತ್ತೂರು ಉಪವಿಭಾಗದ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ತ್ವರಿತ ತನಿಖೆಗೆ ಭರವಸೆ ನೀಡಿದ್ದಾರೆ. ಹೇಯ ಕೃತ್ಯದ ಹಿಂದಿರುವವರನ್ನು ಶೀಘ್ರವೇ ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅಪರಾಧ ಸ್ಥಳವು ಕೇರಳದ ಗಡಿಗೆ ಸಮೀಪದಲ್ಲಿದೆ ಮತ್ತು ತನಿಖೆಯಲ್ಲಿ ಮುನ್ನಡೆಯಲು ಪೊಲೀಸರು ನೆರೆಯ ರಾಜ್ಯದ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಹಂತಕರನ್ನು ಬಂಧಿಸುವ ಪ್ರಯತ್ನದ ಜೊತೆಗೆ, ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಗಮನಹರಿಸುತ್ತಿದೆ ಎಂದು ಅವರು ಹೇಳಿದರು. “ಯುವಕನನ್ನು ಕಳೆದುಕೊಂಡ ಮೇಲೆ ಕೋಪ ಬರುವುದು ಸಹಜ, ಆದರೆ ಜನರು ಶಾಂತಿ ಕಾಪಾಡುವಂತೆ ವಿನಂತಿಸುತ್ತೇನೆ” ಎಂದು ಗೃಹ ಸಚಿವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಅಂಗಡಿಗಳು ಮತ್ತು ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement