ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಜನರ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ ಬೆಂಬಲ, ಕ್ರಮ ಕೈಗೊಳ್ಳಲು ಸಿಎಂಗೆ ಆಗ್ರಹ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಜುಲೈ 30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ ಅತ್ಯವಶ್ಯವಾಗಿದೆ ಎಂದು ಹೇಳಿದ್ದಾರೆ
ನಾಡಿನ ಸರ್ವತೋಮುಖವಾದ ಅಭಿವೃದ್ಧಿಗೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಾದದ್ದು. ಈ ಜಿಲ್ಲೆಯ ಜನರ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರದಿಂದ ಅಪೇಕ್ಷಿಸುತ್ತಿರುವ ಅತ್ಯಂತ ಮೂಲಭೂತ ಹಾಗೂ ಅನಿವಾರ್ಯವಾದ ವ್ಯವಸ್ಥೆ ಎಂದರೆ ಅದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಎಂದು ಅವರು ಹೇಳಿದ್ದಾರೆ.

ದಿನೇ ದಿನೇ ಆತಂಕಕಾರಿ ರೋಗಗಳು ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ತುರ್ತಾಗಿ ಚಿಕಿತ್ಸೆ ಹಾಗೂ ವೈದ್ಯೋಪಚಾರವನ್ನು ಒದಗಿಸುವ ಮೂಲಭೂತ ವ್ಯವಸ್ಥೆಯು ಇಲ್ಲವಾದಾಗ ಜನರಲ್ಲಿ ಸಹಜವಾಗಿ ಆತಂಕ ಉಂಟಾಗುತ್ತದೆ. ದೂರದ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿಯೇ ಪ್ರಾಣ ಹಾನಿಯಾಗಿರುವ ಅನೇಕ ಘಟನೆಗಳು ನಮ್ಮ ಮುಂದೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ತುರ್ತಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಆಗಬೇಕಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಪ್ರಾಮಾಣಿಕವಾದ ಈ ಬೇಡಿಕೆಯು ಪ್ರತಿಭಟನಾ ಸ್ವರೂಪವನ್ನು ಪಡೆದುಕೊಳ್ಳದಂತೆ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿರುವ ಅವರು, ಉತ್ತರಕನ್ನಡ ಜಿಲ್ಲೆಯ ಸಮಗ್ರ ಜನತೆಯ ಒತ್ತಾಯಪೂರ್ವಕವಾದ ಈ ಬೇಡಿಕೆಯನ್ನು ಸರ್ಕಾರಕ್ಕೆ ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಈ ಉದ್ದೇಶದಿಂದ ಜುಲೈ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾದ ಮೌನ ಪ್ರತಿಭಟನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಕನ್ನಡ ಜಿಲ್ಲೆಯ ಎಲ್ಲರೂ ತಮ್ಮ ಜಿಲ್ಲೆ ಎಂಬ ಅಭಿಮಾನದಿಂದ ಪಾಲ್ಗೊಂಡು, ಸರ್ಕಾರಕ್ಕೆ ಈ ಜಿಲ್ಲೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವಂತಾಗಬೇಕು ಎಂದು ಕೋರಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement