ಭಾರಿ ಮಳೆಗೆ ಪ್ರವಾಹ : ಎರಡು ದಿನ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳದಂತೆ ಸೂಚನೆ

ಸುಬ್ರಹ್ಮಣ್ಯ: ಭಾರಿ ಮಳೆ ಸುರಿಯುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಆದಿ ಸುಬ್ರಹ್ಮಣ್ಯ ದೇಗುಲದ ಒಳಗೆ ನೀರು ಹೊಕ್ಕಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಹೊರ ಜಿಲ್ಲೆಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಕುಮಾರಧಾರ ನದಿ ಉಕ್ಕಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ನೀರು ಒಳಹೊಕ್ಕಿದೆ. ಸುಬ್ರಹ್ಮಣ್ಯದ ದರ್ಪಣ ತೀರ್ಥ ಉಕ್ಕಿ ಹರಿಯುತ್ತಿದೆ. ನಾಗರ ಪಂಚಮಿಯಂದು ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಆಗಸ್ಟ್ 2 ಮತ್ತು 3 ರಂದು ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು ಮುಳುಗಡೆಯಾಗಿದೆ. ಕ್ಷೇತ್ರ ಪರಿಸರದಾದ್ಯಂತ ಮನೆ, ಅಂಗಡಿಗಳು ಜಲಾವೃತವಾಗಿವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪರದಾಡುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಭಕ್ತರು ಕ್ಷೇತ್ರಕ್ಕೆ ತೆರಳದಂತೆ ಭಕ್ತರಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮನವಿ ಮಾಡಿಕೊಂಡಿದ್ದಾರೆ.
ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಕೊಲ್ಲಮೊಗ್ರು ಕಲ್ಮಕಾರು, ಬಾಳುಗೋಡು ಐನಕಿದು ಮೊದಲಾದ ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಭಾರಿ ಮಳೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ವರುಣನರ್ಭಟಕ್ಕೆ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ನಾಶಗೊಂಡಿದೆ ಎಂದು ವರದಿಯಾಗಿದೆ. ಮನೆ ಮಂದಿ ಮಣ್ಣಿನಡ್ಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಧಾರಾಕಾರ ಮಳೆಗೆ ಏಕಾಏಕಿ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಇಬ್ಬರು ಮಕ್ಕಳು ಓರ್ವ ವೃದ್ದೆ ಸಹಿತ ನಾಲ್ಕೈದ್ದು ಮಂದಿ ವಾಸಿಸುತ್ತಿದ್ದರು. ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement