ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಿಲೀಫ್:‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಕೋರ್ಟ್‌ನಿಂದ ಜಾಮೀನು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಇತರರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2019 ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್ ಮತ್ತು ಅವರ ಸಹಚರರನ್ನು ಇಡಿ ಬಂಧಿಸಿತ್ತು. ಶಿವಕುಮಾರ್ ಮತ್ತು ಇತರರು ಇಡಿ ದಾಖಲಿಸಿದ ಅಕ್ರಮ ಹಣ ವರ್ಗವಾಣೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಶಿವಕುಮಾರ್ ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜುಲೈ 30 ರಂದು ಎರಡೂ ಕಡೆಯ ವಿಚಾರಣೆಯ ನಂತರ ಆದೇಶವನ್ನು ಕಾಯ್ದಿರಿಸಿದ್ದರು. ಆದೇಶವನ್ನು ಉಚ್ಚರಿಸುವಾಗ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ತಿಳಿಸಿದ್ದರು.

ಶಿವಕುಮಾರ್ ಮತ್ತು ಉದ್ಯಮಿ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್‌ಪೋರ್ಟ್ ಮಾಲೀಕ ಸುನೀಲಕುಮಾರ್ ಶರ್ಮಾ, ಕರ್ನಾಟಕ ಭವನದ ಉದ್ಯೋಗಿ ಆಂಜನೇಯ ಮತ್ತು ರಾಜೇಂದ್ರ ಸೇರಿದಂತೆ ಇತರ ಆರೋಪಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿವರ್ತಿಸಲು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಶಿವಕುಮಾರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿವರ್ತಿಸುವಂತೆ ಶಿವಕುಮಾರ್ ಪರ ವಕೀಲ ದಯನಕೃಷ್ಣನ್ ಮನವಿ ಮಾಡಿದ್ದರು. ಇದಲ್ಲದೆ, ಅವರು ಅಧಿಕಾರದಲ್ಲಿಲ್ಲ ಮತ್ತು ಆದ್ದರಿಂದ ಸಾಕ್ಷ್ಯವನ್ನು ಹಾಳುಮಾಡುವ ಭಯವಿಲ್ಲ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಆದರೆ, ಇಡಿ ಪರ ವಕೀಲರು ಸಾಮಾನ್ಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು. ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದ್ದು, ಅವರು ಪ್ರಭಾವಿ ವ್ಯಕ್ತಿಗಳು ಎಂದು ಹೇಳಿದರು. ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಿಂದ 8.59 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡ ನಂತರ ಶಿವಕುಮಾರ್ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಶಿವಕುಮಾರ್ ಮತ್ತು ಇತರರ ವಿರುದ್ಧ ಇಡಿ ಮೇ 26 ರಂದು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.
ಇ.ಡಿಯು ಈ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3, 2019 ರಂದು ಬಂಧಿಸಿತ್ತು ಮತ್ತು ದೆಹಲಿ ಹೈಕೋರ್ಟ್ 2019 ರ ಅಕ್ಟೋಬರ್ 23 ರಂದು ಮಧ್ಯಂತರ ಜಾಮೀನು ನೀಡಿತ್ತು. ಈ ಹಿಂದೆ ಶಿವಕುಮಾರ್ ಮತ್ತು ಇತರರ ವಿರುದ್ಧ ಸಲ್ಲಿಸಿದ ಆದಾಯ ತೆರಿಗೆ ಇಲಾಖೆ ಚಾರ್ಜ್ ಶೀಟ್ ಆಧರಿಸಿ ಇಡಿ ಪ್ರಕರಣವನ್ನು ದಾಖಲಿಸಿತ್ತು. .

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement