ಭಟ್ಕಳ: ಭಾರೀ ಮಳೆಗೆ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಿಲುಕಿರುವ ಶಂಕೆ, ಹಲವು ಗ್ರಾಮಗಳ ಸಂಪರ್ಕ ಕಡಿತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಈವರೆಗೆ ಮನೆಯವರ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದೆ. ಆದರೆ ಮಳೆನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ದುರಂತ ಸ್ಥಳ ತಲುಪಲು ವಿಳಂಬವಾತ್ತಿದೆ. ಮನೆಯ ಮೇಲೆ ಕುಸಿದಿರುವ ಮಣ್ಣು ತೆರವುಗೊಳಿಸಿ, ಸಿಲುಕಿರುವವರನ್ನು ಕಾಪಾಡಲು ಸ್ಥಳೀಯರು ಶ್ರಮಿಸುತ್ತಿದ್ದಾರೆ.
ಮುಟ್ಟಳ್ಳಿಯಲ್ಲಿ ಗುಡ್ಡವೊಂದು ಕುಸಿದು ಮನೆಯ ಮೇಲೆಯೇ ಬಿದ್ದ ಪರಿಣಾಮ ಮನೆಯೊಳಗಿದ್ದ ಲಕ್ಷೀ ನಾರಾಯಣ ನಾಯ್ಕ (48), ಅನಂತ ನಾರಾಯಣ ನಾಯ್ಕ (32), ಲಕ್ಷ್ಮೀ ನಾಯ್ಕ (33), ಪ್ರವೀಣ ಬಾಲಕೃಷ್ಣ ನಾಯ್ಕ (20) ಮನೆಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹಲವೆಡೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ತೋಟ ಹಾಗೂ ಮನೆಗಳಿಗೆ ನುಗ್ಗಿದೆ, ಅನೇಕ ಮನೆಯವರು ಮನೆಯೊಳಗಡೆಯೇ ಸಿಲುಕಿದ್ದರು. ಅಕ್ಕ ಪಕ್ಕದವರು ಸಾಹಸ ಮಾಡಿ ಮನೆಯವರನ್ನು ಹೊರಕ್ಕೆ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ವರದಿಯಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಶಿರಾಲಿಯ ಸಾರದಹೊಳೆ ಕೋಟೆ ಶ್ರೀ ಹನುಮಂತ ದೇವಸ್ಥಾನದ ಸುತ್ತಮತ್ತಲ ಪ್ರದೇಶದಲ್ಲಿ ಆರೇಳು ಅಡಿಗಳಷ್ಟು ನೀರು ನಿಂತಿದೆ ಎಂದು ವರದಿಯಾಗಿದೆ.
ತಾಲೂಕಿನ ಮಾವಿನಕುರ್ವೆ, ಬೆಳ್ನಿ ಶಿರಾಲಿ, ಮಾವಿನಕಟ್ಟೆ, ಮುರ್ಡೇಶ್ವರ ಭಾಗದಲ್ಲಿ ಸಹ ನೀರು ನಿಂತು ಅನೇಕ ಮನೆಗಳು ಜಲಾವೃತವಾಗಿವೆ. ಮನೆಯ ಮುಂದೆ ನಿಲ್ಲಿಸಿಟ್ಟ ಕಾರುಗಳು ನೀರಿನಲ್ಲಿ ತೇಲಾಡುತ್ತಿವೆ. ನೀರಕಂಠದಲ್ಲಿ ಮನೆಯೊಂದರಲ್ಲಿ ಸಿಲುಕಿದ್ದ ವೃದ್ಧ ದಂಪತಿಗಳನ್ನು ಗ್ರಾಮಸ್ಥರೇ ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಲ್ಲಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಶಿರಾಲಿ ಮತ್ತು ರಂಗಿನಕಟ್ಟೆ ಗ್ರಾಮಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಬೈಂದೂರು ರಸ್ತೆ ಬಂದ್ ಆಗಿದೆ. ಕಾರವಾರ-ಭಟ್ಕಳ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡು ಕಿಲೊಮೀಟರ್​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement