ನೆರೆಪೀಡಿತ ಭಟ್ಕಳಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ: ಭೂ ಕುಸಿತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ

ಕಾರವಾರ: ರಾಜ್ಯಾದ್ಯಂತ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂ ಕುಸಿತವಾಗಿ ನಾಲ್ವರು ಮೃತಪಟ್ಟ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈವರೆಗಿನ ಮಾಹಿತಿಯ ಪ್ರಕಾರ, 14 ಜಿಲ್ಲೆಗಳಲ್ಲಿ ಮಳೆಯಿಂದ ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ನಾಲ್ವರು ಸೇರಿ ಕೆಲ ಜಿಲ್ಲೆಗಳಲ್ಲಿ ಮೃತಪಟ್ಟಿದ್ದಾರೆ. ಸುಮಾರು 600 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 21,471 ಹೆಕ್ಟೇರ್‌ಗಳಷ್ಟು ಕೃಷಿ ಪ್ರದೇಶ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಭೂಕುಸಿತವಾದ ಪ್ರದೇಶಗಳ ಜಿಯಾಲಜಿಕಲ್ ಸರ್ವೆ ಮಾಡಿಸಲಾಗುವುದು. ಮುಟ್ಟಳ್ಳಿಯಲ್ಲಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳಂತೆ ಒಟ್ಟು ₹ 20 ಲಕ್ಷ ಪರಿಹಾರ ವಿತರಿಸಲಾಗಿದೆ. ಮಕ್ಕಳ ಸ್ನಾತಕೋತ್ತರ ವಿದ್ಯಾಭ್ಯಾಸದ ತನಕ ಸರ್ಕಾರವೇ ಜವಾಬ್ದಾರಿ ವಹಿಸಲಿದೆ. ಭೂಕುಸಿತವಾಗಿ ನೆಲಸಮವಾದ ಮನೆಯವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಪ್ರಕಟಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಮುಟ್ಟಳ್ಳಿಯ ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ, ಗುಡ್ಡ ಕುಸಿತದಿಂದ ಸಾವಿಗೀಡಾದ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನೆರೆ ಸಂತ್ರಸ್ತರನ್ನು ಕೂಡಾ ಭೇಟಿ ಮಾಡಿದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮೃತ ಲಕ್ಷ್ಮೀ ನಾರಾಯಣ ನಾಯ್ಕ್ ಅವರ ಪುತ್ರ ಈಶ್ವರ ನಾರಾಯಣ ನಾಯ್ಕ್, ಪುತ್ರಿ ಮಾಧವಿ ಹಾಗೂ ಮೃತ ಬಾಲಕ ಪ್ರವೀಣ ತಂದೆ ಬಾಲಕೃಷ್ಣ ಅವರನ್ನು ಭೇಟಿಯಾದರು. ಮೃತ ಲಕ್ಷ್ಮೀ ನಾರಾಯಣ ನಾಯ್ಕ್ (60) ಅವರ ಮಕ್ಕಳಾದ ಲಕ್ಷ್ಮೀ, ಅನಂತ ಹಾಗೂ ಬಾಲಕೃಷ್ಣ ಅವರ ಓರ್ವ ಪುತ್ರ ಪ್ರವೀಣ ಮಂಗಳವಾರ ಭೂ ಕುಸಿತದಿಂದಾಗಿ ಮನೆ ಕುಸಿದು ಮೃತರಾಗಿದ್ದರು.

ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆ ಸಮಾರಂಭದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ 75 ವರ್ಷವಾಗಿದ್ದು ವೈಯಕ್ತಿಕವಾಗಿ ನನಗೆ ಸಂತಸ ಕೊಟ್ಟಿದೆ. ದೀರ್ಘ ಕಾಲ ಬಾಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಜನ ಪ್ರವಾಹದಿಂದ ಸಾವು, ನೋವಿನ ಸಂಕಷ್ಟದಲ್ಲಿರುವಾಗ ವೈಯಕ್ತಿಕ ಉತ್ಸವಗಳು ಬೇಕೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು’ ಎಂದಷ್ಟೆ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement