ಪ್ರವೀಣ್ ಹತ್ಯೆ ಪ್ರಕರಣ: ಮೂವರು ಮುಖ್ಯ ಆರೋಪಿಗಳ ಬಂಧನದ ಮಾಹಿತಿ ನೀಡಿದ ಎಡಿಜಿಪಿ ಅಲೋಕಕುಮಾರ್

ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಅಲೋಕಕುಮಾರ್​ ಅವರು, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಇಂದು, ಗುರುವಾರ ಬೆಳಗ್ಗೆ ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದೆ. ಸುಳ್ಯದ ಶಿಯಾಬ್ (33), ಅಂಕತಡ್ಕದ ರಿಯಾಜ್‌ (27) ಹಾಗೂ ಸುಳ್ಯದ ಎಲಿಮಲೆ ನಿವಾಸಿ ಬಶೀರ್‌ ಎಂಬವರನ್ನು ಬಂಧಿಸಲಾಗಿದೆ. ಶಿಯಾಬ್‌ ಕ್ಯಾಂಪ್ಕೋ ಕಂಪನಿಗೆ ಕೊಕ್ಕೊ ವಿತರಣೆ ಮಾಡುತ್ತಿದ್ದ. ರಿಯಾಝ್ ಕೋಳಿ ವ್ಯಾಪಾರ ಮಾಡುತ್ತಿದ್ದ ಹಾಗೂ ಬಶೀರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರು ಮಾಹಿತಿ ನೀಡಿದರು. ಹತ್ಯೆಯ ಆರೋಪಿಗಳಿಗೆ ಪಿಎಫ್‍ಐ ಮತ್ತು ಎಸ್‍ಡಿಪಿಐ ಜೊತೆ ಸಂಬಂಧ ಇರುವ ಶಂಕೆ ಇರುವುದರಿಂದ ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದರು.

15 ದಿನಗಳಿಂದ ಪದೇಪದೆ ಜಾಗ ಬದಲಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ತಲಪಾಡಿ ಚೆಕ್ ಪೋಸ್ಟ್​ನಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದ್ದು, ಕೃತ್ಯಕ್ಕೆ ಕಪ್ಪು ಸ್ಪ್ಲೆಂಡರ್ ಬೈಕ್‌ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನೂ ವಶಪಡಿಸಿಕೊಳ್ಳಾಗುವುದು ಎಂದು ತಿಳಿಸಿದರು.
ಪ್ರಕರಣಗಳಲ್ಲಿ ಸಂಚು ರೂಪಿಸಿದ ಹಾಗೂ ಸಹಕಾರ ನೀಡಿದ ಒಟ್ಟು 7 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಮೂರು ಆರೋಪಿಗಳ ಬಂಧನ ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ವಿಶೇಷ ತಂಡ ರಚಿಸಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕೃತ್ಯಕ್ಕೆ ಬಳಸಿದ ವಸ್ತುಗಳನ್ನ ವಶಕ್ಕೆ ಪಡೆದ ಬಳಿಕ ತನಿಖೆಯನ್ನು ಎನ್​ಐಎಗೆ ಹಸ್ತಾಂತರಿಸಲಾಗುವುದು. ತನಿಖೆ ಮುಂದುವರಿದಿದ್ದು ಹತ್ಯೆ ಹಾಗೂ ಆರೋಪಿಗಳ ರಕ್ಷಣೆಗೆ ಸಹಕಾರ ನೀಡಿದವರ ಬಂಧನವೂ ಆಗಲಿದೆ ಹೇಳಿದ ಅವರು, ಎಲ್ಲ ಮಾಹಿತಿಯನ್ನು ನಾವು ಎನ್‍ಐಎಗೆ ನೀಡುತ್ತೇವೆ. ಎನ್‍ಐಎ ಕೂಡಾ ತನಿಖೆ ಮುಂದುವರಿಸುತ್ತಿದೆ. ನಮ್ಮ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸ್ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದರು.
ಜುಲೈ 26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಪ್ರವೀಣ ನೆಟ್ಟಾರು ಅವರನ್ನು ಕೊಚ್ಚಿ ಪರಾರಿಯಾಗಿದ್ದರು. ಮೃತ ಪ್ರವೀಣ್ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement