ಹೈಕೋರ್ಟ್‌ ಮಹತ್ವದ ತೀರ್ಪು…: ಕರ್ನಾಟಕದ ಎಸಿಬಿಯನ್ನೇ ರದ್ದು ಪಡಿಸಿದ ಹೈಕೋರ್ಟ್, ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿದ್ದ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ)ವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲದೆ, ಬಾಕಿ ಉಳಿದಿರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶಿಸಿದೆ.
ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್, ಇದುವರೆಗೆ ಎಸಿಬಿ ನಡೆಸಿರುವ ತನಿಖೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ತಕ್ಷಣವೇ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ನ್ಯಾ. ಕೆ.ಎಸ್. ಹೇಮಲೇಖ ಅವರಿದ್ದ ಪೀಠ ಹೇಳಿದೆ.

ಕಾಂಗ್ರೆಸ್​ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2016ರಂದು ಎಸಿಬಿ ರಚಿಸಿ ಆದೇಶ ಹೊರಡಿಸಿತ್ತು. ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್​ಗೆ ಸಲ್ಲಿಕೆಯಾಗಿದ್ದವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿದ್ದ ಅಧಿಸೂಚನೆಯನ್ನು 2016ರ ಮಾರ್ಚ್‌ 19ರಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ಕುರಿತು ಈಗ ತೀರ್ಪು ಪ್ರಕಟಿಸಿದ ಹೈಕೋರ್ಟ್ ಎಸಿಬಿ ರಚನೆಯನ್ನೆ ರದ್ದು ಮಾಡಿದೆ. ಹಾಗೂ ಅದರಲ್ಲಿ ಬಾಕಿ ಇದ್ದ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.
ಹೈಕೋರ್ಟ್ ಈ ಆದೇಶದಿಂದ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡಿದ್ದು ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಿದಂತಾಗಿದೆ. ಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು. ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು ಎಂದು ಸಹ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಎಸಿಬಿ ರಚನೆ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ, ಚಿದಾನಂದ ಅರಸ್, ಸಮಾಜ ಪರಿವರ್ತನಾ ಸಮುದಾಯ, ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು  ಈ ಸಂಬಂಧ ಇಂದು ತೀರ್ಪು ಪ್ರಕಟಗೊಂಡಿದ್ದು ಎಸಿಬಿ ರಚನೆ ಆದೇಶ ರದ್ದುಪಡಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸಿಬಿ ರಚನೆಯಾಗಿತ್ತು. ಹೈಕೋರ್ಟ್​ನ ಈ ಆದೇಶದ ಮೂಲಕ ಅಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement