ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಸಾಹಿತ್ಯ ವಿಮರ್ಶಕ ಪ್ರೊ. ಎಂ.ಎಚ್​.ಕೃಷ್ಣಯ್ಯ ನಿಧನ

ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್ ಕೃಷ್ಣಯ್ಯ ಅವರು, ಇಂದು, ಶುಕ್ರವಾರ   ನಿಧನರಾಗಿದ್ದಾರೆ.
ಪ್ರೊ. ಕೃಷ್ಣಯ್ಯ ಅವರಿಗೆ 85 ವರ್ಷ ವಯಸ್ಸಾಗಿತ್ತು. ಉತ್ತಮ ಬರಹಗಾರರು, ಪ್ರಸಿದ್ಧ ಸಾಹಿತ್ಯ ವಿಮರ್ಶಕರು ಮತ್ತು ಕಲಾಪ್ರೇಮಿಗಳಾಗಿದ್ದರು.ಇವರ ಅಂತಿಮ ಸಂಸ್ಕಾರವು ಬೆಂಗಳೂರಿನ ಗಾಯತ್ರಿನಗರದ ಹರಿಶ್ಚಂದ್ರ ಘಾಟ್​ನಲ್ಲಿ ನಾಳೆ (ಶನಿವಾರ) 11 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಸಮೀಪವರ್ತಿಗಳು ತಿಳಿಸಿದ್ದಾರೆ.
1937ರ ಜುಲೈ 21ರಂದು ಮೈಸೂರಿನಲ್ಲಿ ಜನಿಸಿದ ಕೃಷ್ಣಯ್ಯನವರ ತಂದೆ ಹುಚ್ಚಯ್ಯ ಹಾಗೂ ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ. ಪದವಿಗಳನ್ನು ಪಡೆದ ಅವರು ಪ್ರಾಧ್ಯಾಪಕರಾಗಿ ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮೊದಲಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಕೃಷ್ಣಯ್ಯನವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್. ಎಂ. ಹಡಪದ, ರೂಪಶಿಲ್ಪಿ ಬಸವಯ್ಯ, ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಬರಹಗಳು ಹಾಗೂ ಕುವೆಂಪು ಸಾಹಿತ್ಯ : ಚಿತ್ರ ಸಂಪುಟದಂತಹ ಸಂಪಾದನೆಗಳು ಈ ಕೃತಿಗಳಲ್ಲಿ ಸೇರಿವೆ. ಅವರ ‘ಕಲಾ ದರ್ಶನ’ ಕೃತಿ ಕನ್ನಡ ನಾಡಿನಲ್ಲಿ ಗೌರವಾನ್ವಿತ ಸಂಪುಟವೆನಿಸಿವೆ. ಉದಯ ಭಾನು ಕಲಾ ಸಂಘವು ತನ್ನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತಂದ ಸುಮಾರು 3000 ಪುಟಗಳ ‘ಬೆಂಗಳೂರು ದರ್ಶನ’ ಬೃಹತ್ ಸಂಪುಟಗಳ ಸಂಪಾದಕರಾಗಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಅವರ ಶೃಂಗಾರ ಲಹರಿ ಕೃತಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಇವೇ ಮೊದಲಾದ ಪುರಸ್ಕಾರಗಳಿಂದ ಸಮ್ಮಾನಿತರಾಗಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರ, ತಂಜಾವೂರಿನಲ್ಲಿ ಕೇಂದ್ರ ಹೊಂದಿರುವ ದಕ್ಷಿಣ ಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘ ಮೊದಲಾದ ಕಡೆಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement