ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗ ಅಭಿಯಾನ

ಹುಬ್ಬಳ್ಳಿ: ಭಾರತೀಯ ಜೀವನ‌ ಶೈಲಿ ನಮ್ಮಲ್ಲಿ ಅಡಕವಾದಾಗ ಮಾತ್ರ ನಮ್ಮ‌ ಹಿರಿಯರು ನಮಗೆ ಕೊಟ್ಟ ಮೌಲ್ಯಗಳು ಉಳಿಯುತ್ತವೆ. ಭಾರತದ ರಕ್ಷಣೆ ಹಾಗೂ ಏಳಿಗೆಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬರಬೇಕಾದರೆ ಅಸಂಖ್ಯ ಹೋರಾಟಗಾರರ ಬಲಿದಾನವಾಯಿತು. ತಾಯಿ ಭಾರತಾಂಬೆಯ ಮುಕ್ತಿಗೆ ಲಕ್ಷಾಂತರ ಜನ ಪ್ರಾಣಾರ್ಪಣೆಗೈದರು. ಅವರ ಸ್ಮರಣೆ ನಿರಂತರವಾಗಬೇಕು. ಅವರ ತ್ಯಾಗ, ಬಲಿದಾನಗಳಿಗೆ ಗೌರವ ಸೂಚಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಮಾತೃಭಾಷೆ ಉಳಿಸುವುದು ಸಹ ಸ್ವರಾಜ್ಯವನ್ನು ಉಳಿಸುವ ಭಾಗವಾಗಿದೆ. ಆಂಗ್ಲ ಭಾಷೆಯ ವ್ಯಾಮೋಹ ಕಡಿಮೆಯಾಗಬೇಕು. ದೇಶ, ಸಂಸ್ಕೃತಿಯ ರಕ್ಷಣೆಯಾಗಬೇಕಾದರೆ ಮೊದಲು ನಮ್ಮ ಮಾತೃ ಭಾಷೆ ಉಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಿಮ್ಸ್ ವೈದ್ಯಾಧಿಕಾರಿ ಡಾ. ಕ್ರಾಂತಿಕಿರಣ ಮಾತನಾಡಿ, ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹೋರಾಟ ಹಾಗೂ ಅದರ ಇತಿಹಾಸ ಅನನ್ಯ.‌ ಆದರೆ ಪಠ್ಯಪುಸ್ತಕಗಳಲ್ಲಿ ಇದರ ಕುರಿತು ತಿರುಚಿ ಬರೆಯಲಾಗಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಸರಿಯಾಗಿ ಬೋಧನೆಯಾಗಬೇಕು. ಸುಮಾರು 20 ಲಕ್ಷ ಜನ ದೇಶದ ಸ್ವರಾಜ್ಯಕ್ಕೆ ಹೋರಾಡಿದ್ದಾರೆ. ಇನ್ನೂ ಅಸಂಖ್ಯ ಅಜ್ಞಾತ ಹೋರಾಟಗಾರರಿದ್ದು, ಅವರ ಪರಿಚಯ ಯುವಪೀಳಿಗೆಗೆ ಆಗಬೇಕು ಎಂದು ಹೇಳಿದರು.
ಪ್ರಾಂತ ಸಹ ಕಾರ್ಯವಾಹ ಕಿರಣ ಗುಡ್ಡದಕೇರಿ, ಪ್ರಾಂತ ಸಹ ಪ್ರಚಾರಕ ಶ್ರೀನಿವಾಸ ನಾಯಕ ಇತರರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement