ಕೈರೋ ಕಾಪ್ಟಿಕ್ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ ಬೆಂಕಿ ಅನಾಹುತ: 41 ಜನರು ಸಾವು, 14 ಮಂದಿಗೆ ಗಾಯ

ಕೈರೊ: ಭಾನುವಾರದ ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಗ್ರೇಟರ್ ಕೈರೊದ ಕಾರ್ಮಿಕ ವರ್ಗದ ಜಿಲ್ಲೆಯ ಕಾಪ್ಟಿಕ್ ಕ್ರೈಸ್ತ ಚರ್ಚ್‌ನಲ್ಲಿ ಬೆಂಕಿ ಅನಾಹುತದಲ್ಲಿ 40 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.
ಈಜಿಪ್ಟಿನ ಗೀಜಾ ಗವರ್ನರೇಟ್‌ನ ಭಾಗವಾದ ನೈಲ್ ನದಿಯ ಪಶ್ಚಿಮಕ್ಕೆ ಜನನಿಬಿಡ ಇಂಬಾಬಾ ಪಕ್ಕದಲ್ಲಿ ನೆಲೆಗೊಂಡಿರುವ ಅಬು ಸಿಫಿನ್ ಚರ್ಚ್‌ನಲ್ಲಿ ವಿದ್ಯುತ್ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಸಿಕ್ಕಿಬಿದ್ದವರನ್ನು ರಕ್ಷಿಸಲು ಜನರು ಉರಿಯುತ್ತಿರುವ ಚರ್ಚ್‌ನೊಳಗೆ ಧಾವಿಸದರು. ಆದರೆ ವಿಪರೀತ ಶಾಖ ಮತ್ತು ಮಾರಣಾಂತಿಕ ಹೊಗೆಯಿಂದ ಅನೇಕರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈಜಿಪ್ಟಿನ ಕಾಪ್ಟಿಕ್ ಚರ್ಚ್ ಮತ್ತು ಆರೋಗ್ಯ ಸಚಿವಾಲಯವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ತಿಳಿಸಿದೆ. ಆದರೆ ಘಟನೆಯಲ್ಲಿ ಬೆಂಕಿಯಲ್ಲಿ 41 ಮಂದಿ ಸಾವಿಗೀಡಾಗಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಬೆಳಿಗ್ಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ, ಬೆಂಕಿ ನಿಯಂತ್ರಣಕ್ಕೆ ತರಲು ಹಾಗೂ ಜನರನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಚರ್ಚ್ ಕಟ್ಟಡದ ಎರಡನೇ ಮಹಡಿಯಲ್ಲಿನ ಹವಾನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಧಿವಿಜ್ಞಾನ ಪುರಾವೆಗಳು ಬಹಿರಂಗಪಡಿಸಿವೆ” ಎಂದು ಆಂತರಿಕ ಸಚಿವಾಲಯವು ನಂತರ ಹೇಳಿದೆ.ಇಂಬಾಬಾದ ಮತ್ತೊಂದು ಹತ್ತಿರದ ಚರ್ಚ್‌ನ ಫಾದರ್ ಫರೀದ್ ಫಹ್ಮಿ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ ಎಂದು ಎಎಫ್‌ಪಿಗೆ ತಿಳಿಸಿದ್ದಾರೆ. ವಿದ್ಯುತ್ ಸ್ಥಗಿತಗೊಂಡಿದೆ ಮತ್ತು ಅವರು ಜನರೇಟರ್ ಅನ್ನು ಬಳಸುತ್ತಿದ್ದರು. ನಂತರ ವಿದ್ಯುತ್ ಮರಳಿದಾಗ, ಅದು ಓವರ್ಲೋಡಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಕಾಪ್ಟ್‌ಗಳು ಮಧ್ಯಪ್ರಾಚ್ಯದಲ್ಲಿ ಅತಿದೊಡ್ಡ ಕ್ರೈಸ್ತ ಸಮುದಾಯವಾಗಿದ್ದು, ಈಜಿಪ್ಟ್‌ನ 10.3 ಕೋಟಿ ಜನರಲ್ಲಿ ಕನಿಷ್ಠ 1 ಕೋಟಿ ಜನರಿದ್ದಾರೆ. ಕಾಪ್ಟ್‌ಗಳು ಇಸ್ಲಾಮಿ ಉಗ್ರಗಾಮಿಗಳಿಂದ ಮಾರಣಾಂತಿಕ ದಾಳಿಯನ್ನು ಅನುಭವಿಸಿದ್ದಾರೆ, ವಿಶೇಷವಾಗಿ 2013 ರಲ್ಲಿ ಸಿಸಿ ಮಾಜಿ ಇಸ್ಲಾಮಿಸ್ಟ್ ಅಧ್ಯಕ್ಷ ಮೊಹಮದ್ ಮೊರ್ಸಿಯನ್ನು ಪದಚ್ಯುತಗೊಳಿಸಿದ ನಂತರ, ಚರ್ಚ್‌ಗಳು, ಶಾಲೆಗಳು ಮತ್ತು ಮನೆಗಳನ್ನು ಸುಟ್ಟುಹಾಕಲಾಯಿತು. ಕಾಪ್ಟ್‌ಗಳು ತಮ್ಮನ್ನು ರಾಜ್ಯದ ಪ್ರಮುಖ ಸ್ಥಾನಗಳಿಂದ ಹೊರಗಿಡಲಾಗಿದೆ ಎಂದು ದೂರಿದ್ದಾರೆ ಮತ್ತು ಮಸೀದಿಗಳಿಗೆ ಹೋಲಿಸಿದರೆ ಚರ್ಚ್‌ಗಳ ನಿರ್ಮಾಣಕ್ಕಾಗಿ ನಿರ್ಬಂಧಿತ ಕಾನೂನ ವಿಧಿಸಿರುವುದನ್ನು ಖಂಡಿಸಿದ್ದಾರೆ.
ಪ್ರತಿ ವರ್ಷ ಕಾಪ್ಟಿಕ್ ಕ್ರಿಸ್‌ಮಸ್ ಮಾಸ್‌ಗೆ ಹಾಜರಾಗುವ ಮೊದಲ ಈಜಿಪ್ಟ್ ಅಧ್ಯಕ್ಷ ಸಿಸಿ, ಇತ್ತೀಚೆಗೆ ಸಾಂವಿಧಾನಿಕ ನ್ಯಾಯಾಲಯದ ಮುಖ್ಯಸ್ಥರಾಗಿ ಮೊದಲ ಕಾಪ್ಟಿಕ್ ನ್ಯಾಯಾಧೀಶರನ್ನು ನೇಮಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement