
ಬೆಂಗಳೂರು: ಕನ್ನಡ ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು 2 ವರ್ಷ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಕನ್ನಡದ ಜನಪ್ರಿಯ ‘ಜೊತೆ ಜೊತೆಯಲಿ ’ಧಾರವಾಹಿಯ ನಾಯಕ ನಟ ಅನಿರುದ್ಧ ಅವರ ಮೇಲೆ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಿಷೇಧ ಹೇರಿದೆ ಎಂದು ವರದಿಯಾಗಿದೆ.
ಧಾರಾವಾಹಿಯ ನಿರ್ಮಾಪಕ ಅರೂರು ಜಗದೀಶ ಅವರ ದೂರಿನ ಮೇರೆಗೆ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಧಾರಾವಾಹಿ ನಿರ್ಮಾಪಕರೆಲ್ಲರೂ ಒಮ್ಮತದಿಂದ ಈ ಕ್ರಮ ಕೈಗೊಂಡಿದ್ದಾರೆ. ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ ಅವರಿಗೆ ಅವಕಾಶ ಕೊಡಬಾರದು ಎಂದು ನಿರ್ಧರಿಸಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ ಅವರು ತಿಳಿಸಿದ್ದಾರೆ.

ಸ್ಕ್ರಿಪ್ಟ್ ವಿಚಾರಕ್ಕೆ ನಿಂದಿಸಿ ಶೂಟಿಂಗ್ ಸೆಟ್ನಿಂದ ಹೊರ ಹೋಗಿದ್ದಾರೆ. ಆ ಸಂಬಂಧ ಜಗಳವಾಡಿದ್ದಾರೆ. ಇಂತಹ ಘಟನೆ ಹಲವು ಸಲ ನಡೆದಿದೆ ಹೀಗಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಆದರೆ ಇದಕ್ಕೆ ತದ್ವಿರುದ್ದವಾಗಿ “ನಿಷೇಧ” ಇಂತಹ ಕ್ರಮಕ್ಕೆ ಯಾವುದೇ ಅವಕಾಶವಿಲ್ಲ. ಮೆಗಾ ಸೀರಿಯಲ್ ಸೆಟ್ಗಳಲ್ಲಿ ಈ ರೀತಿ ಘಟನೆ ಸರ್ವೆ ಸಾಮಾನ್ಯ. ಧಾರವಾಹಿ ಪ್ರಸಾರ ಆಗುತ್ತಿರುವ ಚಾನೆಲ್ ಕಲಾವಿದನನ್ನು ನಿಷೇಧಿಸಬಹುದು. ಇದರ ಹೊರತಾಗಿ ಏಕಾಏಕಿ ಯಾರನ್ನೂ ಬ್ಯಾನ್ ಮಾಡುವ ಅವಕಾಶ ಇಲ್ಲ. ಅವುಗಳನ್ನೆಲ್ಲಾ ಕೂತು ಅವರೇ ಬಗೆಹರಿಸಿಕೊಳ್ಳಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಹೇಳಿದೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ