ಆಜಾದ್ ಆಘಾತದ ನಂತರ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ಹಿಮಾಚಲ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ

ನವದೆಹಲಿ: ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಆನಂದ್ ಶರ್ಮಾ ಅವರು ತಮ್ಮ ಆತ್ಮಗೌರವವನ್ನು ಚೌಕಾಶಿಗೆ ಒಳಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡಿದ ಐದು ದಿನಗಳ ನಂತರ ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆಯಾಗಿದೆ. ಆಜಾದ್ ಅವರು ಆಗಸ್ಟ್ 16 ರಂದು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸಮಾಲೋಚನೆ ಪ್ರಕ್ರಿಯೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಶರ್ಮಾ ಅವರು ಸೋನಿಯಾ ಗಾಂಧಿಗೆ ತಿಳಿಸಿದ್ದಾರೆ. ಆದರೂ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮುಂದುವರಿಸುವುದಾಗಿ ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕರಾದ ಅವರನ್ನು ಏಪ್ರಿಲ್ 26 ರಂದು ಹಿಮಾಚಲ ಪ್ರದೇಶದ ಸಂಚಾಲಕ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ಆಜಾದ್ ಮತ್ತು ಶರ್ಮಾ ಇಬ್ಬರೂ ಕಾಂಗ್ರೆಸ್‌ನ ಭಿನ್ನಮತೀಯ G23 ಗುಂಪಿನ ಪ್ರಮುಖ ನಾಯಕರಾಗಿದ್ದು, ಪಕ್ಷದ ನಾಯಕತ್ವದ ನಿರ್ಧಾರಗಳನ್ನು ಟೀಕಿಸಿದ್ದಾರೆ.ಭೂಪಿಂದರ್ ಸಿಂಗ್ ಹೂಡಾ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಅನುಭವಿಗಳನ್ನು ಒಳಗೊಂಡ ಗುಂಪು ಬ್ಲಾಕ್‌ನಿಂದ ಹಿಡಿದ ಕಾಂಗ್ರೆಸ್‌ ಕಾರ್ಯಕಾರಿಣಿ (CWC) ಹಂತದವರೆಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಿದೆ.
ಹಿಮಾಚಲ ಪ್ರದೇಶದ ಅತಿ ಎತ್ತರದ ನಾಯಕರೆಂದು ಪರಿಗಣಿಸಲ್ಪಟ್ಟಿರುವ ಆನಂದ ಶರ್ಮಾ ಅವರು, ಪಕ್ಷದ ಯಾವುದೇ ಸಭೆಗಳಿಗೆ ತಮ್ಮನ್ನು ಸಮಾಲೋಚಿಸಿ ಅಥವಾ ಆಹ್ವಾನಿಸದ ಕಾರಣ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ತಮ್ಮ ಪತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯಿಂದ ಅಧಿಕಾರ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement