ವಿವಾದದ ನಂತರ ಹೃತಿಕ್ ರೋಷನ್ ಜಾಹೀರಾತಿನ ‘ಮಹಾಕಾಲ ಥಾಲಿ’ ಜಾಹೀರಾತಿಗಾಗಿ ಕ್ಷಮೆಯಾಚಿಸಿದ ಝೊಮಾಟೊ

ನವದೆಹಲಿ: ಮಧ್ಯಪ್ರದೇಶದ ಉಜ್ಜಯನಿಯ ಶಿವನ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನದ ಅರ್ಚಕರು, ಝೊಮಾಟೊ ಕಂಪನಿಯ ಜಾಹೀರಾತೊಂದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದ ಒಂದು ದಿನದ ನಂತರ, ಅದಕ್ಕಾಗಿ ಕ್ಷಮೆಯಾಚಿಸಿದೆ.
ಝೊಮಾಟೊ ಜಾಹೀರಾತಿನಲ್ಲಿ, ಹೃತಿಕ್ ರೋಷನ್ ಅವರು ಉಜ್ಜಯಿನಿಯಲ್ಲಿ ಥಾಲಿ (ಆಹಾರ ತಟ್ಟೆ) ತಿನ್ನಬೇಕೆಂದು ಅನಿಸಿತು, ಆದ್ದರಿಂದ ತಾನು ಅದನ್ನು ‘ಮಹಾಕಾಲ’ದಿಂದ ಆರ್ಡರ್ ಮಾಡಿರುವುದಾಗಿ ಹೇಳುತ್ತಾರೆ.
ಶನಿವಾರ, ಮಹಾಕಾಳೇಶ್ವರ ದೇವಸ್ಥಾನದ ಇಬ್ಬರು ಅರ್ಚಕರು ಝೊಮಾಟೊ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಅಥವಾ ಮಹಾಕಾಲ ಶಿವನ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ, ಇದು ದೇಶಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ.

ಮಹಾಕಾಲ ದೇವಸ್ಥಾನದಲ್ಲಿ ಭಕ್ತರಿಗೆ ಥಾಲಿಯ ಮೇಲೆ ಪ್ರಸಾದವನ್ನು ನೀಡಲಾಗುತ್ತದೆ ಮತ್ತು ಇದು ಬಹಳ ಹೆಸರುವಾಸಿಯಾಗಿದೆ. ದೇವಸ್ಥಾನದ ಥಾಲಿಯನ್ನು ಈ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗಿದೆ. ದೇವಸ್ಥಾನದ ಥಾಲಿಯನ್ನು ಆನ್‌ಲೈನ್‌ ಡೆಲಿವರಿ ಮಾಡುವುದಿಲ್ಲ. ಈ ರೀತಿ ಜಾಹೀರಾತಿನಲ್ಲಿ ಬಳಸಿಕೊಂಡಿರುವುದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಚಕರು ಆರೋಪಿಸಿದ್ದರು.
ಅಲ್ಲದೆ, ಮಹಾಕಾಲ್ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರು ಜಾಹೀರಾತನ್ನು ಟೀಕಿಸಿದ್ದು, ಮಹಾಕಾಲ ಭಕ್ತರಿಗೆ ತಟ್ಟೆಯಲ್ಲಿ (ಥಾಲಿ) ಉಚಿತ ಪ್ರಸಾದ ಎಂದು ನೀಡಲಾಗುತ್ತದೆ ಮತ್ತು ಇದು ಆಹಾರ ವಿತರಣಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದಾದ ಜಾಹೀರಾತು ವಿಷಯವಲ್ಲ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಝೊಮಾಟೊ ಕಂಪನಿ, ಈ ಜಾಹೀರಾತು ಉಜ್ಜಯಿನಿಯ ಮಹಾಕಾಲ್ ರೆಸ್ಟೋರೆಂಟ್‌ನ ಮೆನುವಿನಲ್ಲಿ ಥಾಲಿ ಎಂದು ಶಿಫಾರಸು ಮಾಡಲಾದ ಮೆನು ಆಗಿದೆ. ಮತ್ತು ಇದು ಪೂಜ್ಯ ಮಹಾಕಾಳೇಶ್ವರ ದೇವಸ್ಥಾನದ್ದಲ್ಲ ಎಂದು ತಿಳಿಸಿದೆ. ಹಾಗೂ ಜಾಹೀರಾತಿಗಾಗಿ ಕ್ಷಮೆಯಾಚಿಸಿದೆ. ಅಲ್ಲದೆ, ಈ ಜಾಹೀರಾತು ಇನ್ನು ಮುಂದೆ ಚಾಲನೆಯಲ್ಲಿರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
“ವೀಡಿಯೊವು ಪ್ಯಾನ್-ಇಂಡಿಯಾ ಅಭಿಯಾನದ ಭಾಗವಾಗಿದೆ, ಇದಕ್ಕಾಗಿ ನಾವು ಪ್ರತಿ ನಗರದಲ್ಲಿನ ಜನಪ್ರಿಯತೆಯ ಆಧಾರದ ಮೇಲೆ ಉನ್ನತ ಸ್ಥಳೀಯ ರೆಸ್ಟೋರೆಂಟ್‌ಗಳು ಮತ್ತು ಅವುಗಳ ಉನ್ನತ ಭಕ್ಷ್ಯಗಳನ್ನು ಗುರುತಿಸಿದ್ದೇವೆ. ಉಜ್ಜಯಿನಿಯಲ್ಲಿ ಪ್ರಚಾರಕ್ಕಾಗಿ ಆಯ್ಕೆ ಮಾಡಲಾದ ರೆಸ್ಟೋರೆಂಟ್‌ಗಳಲ್ಲಿ ಮಹಾಕಾಲ ರೆಸ್ಟೋರೆಂಟ್ ಒಂದಾಗಿತ್ತು ಎಂದು ವಿತರಣಾ ಸಂಸ್ಥೆ ತಿಳಿಸಿದೆ.
“ನಾವು ಉಜ್ಜಯಿನಿಯ ಜನರ ಭಾವನೆಗಳನ್ನು ಗೌರವಿಸುತ್ತೇವೆ ಮತ್ತು ಈ ಜಾಹೀರಾತು ಇನ್ನು ಮುಂದೆ ಚಾಲನೆಯಲ್ಲಿ ಇರುವುದಿಲ್ಲ. ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ. ಇದಕ್ಕಾಗಿ ನಾವು ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ” ಎಂದು ಝೊಮಾಟೊ ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement