ಕುಂದಾಪುರ: ಸೀಮಂತ ಕಾರ್ಯಕ್ರಮಕ್ಕೆ ಬಂದ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ

ಕುಂದಾಪುರ: ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಮುಂದ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಹಾಲಿ ಸೊರಬದಲ್ಲಿ ವಾಸಿಸುತ್ತಿದ್ದ ಪೂರ್ಣಿಮಾ ಆಚಾರ್ಯ(38) ಸಾವಿಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಕೋಗಾರ ಮೂಲದ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ .
ಪೂರ್ಣಿಮಾ ಅವರನ್ನು ರವಿ ಆಚಾರ್ಯ ಅವರಿಗೆ ಹದಿನಾರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಟಿಪ್ಪರ್‌ ಚಾಲಕನಾಗಿರುವ ರವಿ ಹೆಮ್ಮಾಡಿ ಸಮೀಪದ ಬಗ್ದಾಡಿಯಲ್ಲಿ ಟಿಪ್ಪರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಮೊದಲು ಇಲ್ಲಿಯೇ ನೆಲೆಸಿದ್ದರು. ಆದರೆ ವಿಪರೀತ ಕುಡಿತದ ಚಟದಿಂದಾಗಿ ರವಿ ಕುಡಿದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆಯಾದ ಸೊರಬದಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.
ಆದರೆ ಹೆಮ್ಮಾಡಿ ಬಳಿ ತಮ್ಮ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದ ಪೂರ್ಣಿಮಾಗೆ ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದರಿಂದ ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿದ್ದಳು. ಆಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಟಿ ಶ್ರೀಕಾಂತ್‌ ಕೆ, ಸಿಪಿಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್‌ ನಾಯ್ಕ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement