2022ರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟ : ಉತ್ತರ ಕನ್ನಡದ ತಮ್ಮಣ್ಣ ಬೀಗಾರಗೆ​​ ಬಾಲ ಸಾಹಿತ್ಯ ಪ್ರಶಸ್ತಿ, ಬಳ್ಳಾರಿಯ ದಾದಾಪೀರ್ ಜೈಮನ್ ಯುವ ಸಾಹಿತ್ಯ ಪ್ರಶಸ್ತಿ

ಸಿದ್ದಾಪುರ (ಉತ್ತರ ಕನ್ನಡ): 2022ರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದ್ದು ಕರ್ನಾಟಕದ ಇಬ್ಬರಿಗೆ ಪ್ರಶಸ್ತಿ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ರ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ ರ ಯುವ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಮ್ಮಣ್ಣ ಬೀಗಾರ್ ಅವರ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೨೨ರ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಪ್ರಶಸ್ತಿಯು 50,000 ನಗದು ಮತ್ತು ಸನ್ಮಾನ ಹೊಂದಿದೆ.
ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರ ನೀಲಕುರಂಜಿ ಕಥಾ ಸಂಕಲನಕ್ಕೆ ಕೇಂದ್ರ ಯುವ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಗಳನ್ನು ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾದವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ. ಬಾಲ ಸಾಹಿತ್ಯ ಪ್ರಶಸ್ತಿಗೆ ಶಿವಲಿಂಗಪ್ಪ ಹಂದಿಹಾಳು , ಲೋಹಿತ್ ನಾಯ್ಕರ್ ಹಾಗೂ ಎಂ ಎಚ್ ನಾಗರಾಜ್ ಅವರು ಜ್ಯೂರಿಗಳಾಗಿದ್ದರು. ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಸ ಉಷಾ, ನಗರಗೆರೆ ರಮೇಶ್ ಹಾಗೂ ಎನ್ ಎಸ್ ಗುಂಡೂರ ಕೆಲಸ ನಿರ್ವಹಿಸಿದ್ದರು.ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಡಾ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆಯಿತು.

ಕತೆಗಾರ ತಮ್ಮಣ್ಣ ಬೀಗಾರ ಅವರ ಬಗ್ಗೆ
‘ತಮ್ಮಣ್ಣ ಬೀಗಾರ’ ಎಂಬ ಕಾವ್ಯ ನಾಮದಿಂದ ಮೂರು ದಶಕಗಳಿಂದ ಬರೆಯತ್ತಿರುವ ತಮ್ಮಣ್ಣ ಕೋಮಾರ ಅವರು ನವೆಂಬರ ೨೨, ೧೯೫೯ ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದವರು. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಶಿಕ್ಷಕರಾಗಿ ಮೂವತ್ತೇಳು ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುತ್ತಾರೆ. ಸಿದ್ದಾಪುರದಲ್ಲಿ ವಾಸಿಸಿರುವ ಇವರು ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು.
ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನು ಅದರ ಹಚ್ಚಹಸಿರಿನ ಹೊದಿಕೆಯನ್ನು ಯಾವುದೇ ಸಾಂಪ್ರದಾಯಿಕ-ನೀತಿಗಳ ಹಂಗಿಲ್ಲದೆ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ ಅವರು. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಗದ್ಯ ಹಾಗೂ ಕವಿತೆಗಳಲ್ಲಿ ಅಡಕವಾಗಿವೆ. ಮಲೆನಾಡಿನ ಮಕ್ಕಳ ಬದುಕು ವiತ್ತು ಅವರ ಬದುಕಿನ ಸಂಗತಿಗಳು ತುಂಬಾ ವೈವಿಧ್ಯಮಯವಾಗಿ ಅರಳಿಕೊಳ್ಳುವುದನ್ನು ಕಾಣಬಹುದು. ಬೆಟ್ಟ-ಕಣಿವೆಗಳನ್ನು ಏರಿ ಇಳಿದ ಮಕ್ಕಳ ಖುಷಿ, ವಿನೋದ, ಹುಡುಗಾಟಿಕೆ ಮುದ ನೀಡುತ್ತವೆ. ಅದೇರೀತಿ ಅಲ್ಲಿಯ ವೈರುಧ್ಯಗಳನ್ನು ಕೂಡಾ ಹೇಳಲು ತಮ್ಮಣ್ಣ ಅವರು ಹಿಂಜರಿಯಲಾರರು. ಮೊದಲಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. .
ಗುಬ್ಬಚ್ಚಿ ಗೂಡು’ ‘ಚಿಂವ್ ಚಿಂವ್’ ‘ಜೀಕ್ ಜೀಕ್’ ‘ಪುಟಾಣಿ ಪುಡಿಕೆ’ ‘ಸೊನ್ನೆ ರಾಶಿ ಸೊನ್ನೆ’ ‘ತೆರೆಯಿರಿ ಕಣ್ಣು’ ‘ಖುಷಿಯ ಬೀಜ’ ‘ಹಾಡಿನ ಹಕ್ಕಿ’ ಮುಂತಾದ ಮಕ್ಕಳ ಕವನಸಂಕಲನಗಳು, ‘ಕಪ್ಪೆಯ ಪಯಣ’ ‘ಜಿಂಕೆ ಮರಿ’ ‘ಹಸಿರೂರಿನ ಹುಡುಗ,’ ‘ಮಲ್ನಾಡೆ ಮಾತಾಡು’, ‘ಅಮ್ಮನ ಚಿತ್ರ,’ ‘ಪುಟ್ಟನ ಕೋಳಿ’, ‘ಉಲ್ಟಾ ಅಂಗಿ’ ‘ಗಿರಗಿಟ್ಟಿ’ ‘ನಕ್ಷತ್ರ ನೋಡುತ್ತ’ ‘ಪುಟ್ಟಿಯೂ ಹಾರುತ್ತಿದ್ದಳು’ ಮುಂತಾದ ಮಕ್ಕಳ ಕಥಾಸಂಕಲನಗಳು ‘ಮಾತಾಟ ಮಾತೂಟ’, ‘ಮರಬಿದ್ದಾಗ’, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳು, ‘ಬಾವಲಿ ಗುಹೆ’ ‘ಫ್ರಾಗಿ ಮತ್ತು ಗೆಳೆಯರು’ ಎಂಬ ಮಕ್ಕಳ ಕಾದಂಬರಿಗಳೂ ಸೇರಿ ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ. ಆಕಾಶವಾಣಿಯಲ್ಲಿ ಇವರ ಕವಿತಗಳು, ದೂರದರ್ಶನದಲ್ಲಿ ಕಲಾಕೃತಿ ಹಾಗೂ ಸಂದರ್ಶನ ಪ್ರಸಾರ ಆಗಿವೆ. ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ಫ್ರಾಗಿ ಮತ್ತು ಗೆಳೆಯರು ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಇದಲ್ಲದೇ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ.ಈಗ 2022 ರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪ್ರಕರಟವಾಗಿದ್ದು ತಮ್ಮಣ್ಣ ಬೀಗಾರ ಅವರಿಗೆ ಬಾವಲಿ ಗುಹೆ ಎನ್ನುವ ಮಕ್ಕಳ ಕಾದಂಬರಿಗೆ ಪ್ರಶಸ್ತಿ ಲಭಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದಕ್ಕೆ ಹೆದರಲ್ಲ: ಕೆ.ಎಸ್.ಈಶ್ವರಪ್ಪ

ದಾದಾಪೀರ್ ಜೈಮನ್…

ದಾದಾಪೀರ್ ಜೈಮನ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯಮಟ್ಟದ ಹಲವಾರು ಕಥಾಸ್ಪರ್ಧೆಗಳಲ್ಲಿ ಇವರ ಕಥೆಗಳು ಬಹುಮಾನ ಪಡೆದುಕೊಂಡಿವೆ. ಇತ್ತೀಚಿಗೆ ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ ಮತ್ತು ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ‘ನೀಲಕುರಿಂಜಿ’ ಇವರ ಮೊದಲ ಕಥಾಸಂಕಲನ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement