ಗಣೇಶ ಹಬ್ಬದ ಸಂದರ್ಭದಲ್ಲಿ ದುಬಾರಿ ದರ ವಸೂಲಿ ಮಾಡಿದರೆ ಕ್ರಮ : ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ಎಚ್ಚರಿಕೆ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಪಡೆದರೆ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಮೂರು ದಿನಗಳಿಂದ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ದರವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆಯಾ ರೂಟ್‌ಗಳಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕೆಂದು ಸೂಚನೆ ನೀಡಿದ್ದೇವೆ. ಈ ಸಂಬಂಧ ಅಧಿಕಾರಿಗಳಿಗೆ ತಪಾಸಣೆ ನಡೆಸಿ ಸೂಕ್ತ ಕ್ರಮ ಜರಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಗೌರಿಗಣೇಶ ಹಬ್ಬದ ವೇಳೆ ಪ್ರಯಾಣಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಇದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಪ್ರಯಾಣಿಕರಿಗೆ ತೊಂದರೆ ಕೊಟ್ಟು ಹೆಚ್ಚಿನ ದರ ವಸೂಲಿ ಮಾಡಿದರೆ ಸಹಿಸುವುದಿಲ್ಲ. ನನ್ನ ಗಮನಕ್ಕೆ ಬಂದರೆ ಅಂತಹ ಬಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ನಾನು ಈಗಲೂ ಖಾಸಗಿ ಬಸ್ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ. ಯಾವ ಯಾವ ರೂಟ್‌ಗಳಿಗೆ ಎಷ್ಟು ದರ ನಿಗದಿಪಡಿಸಿದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೆಂಗಳೂರಿನಿಂದ ತೆರಳಲು ಅನುಕೂಲವಾಗುವಂತೆ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಮುಂಗಡ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಲಿಸಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಶ್ರೀರಾಮುಲು ಅವರು ಹೇಳಿದರು. ೫ಕ್ಕೂ ಹೆಚ್ವು ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಮಾಡಿದಲ್ಲಿ ೫% ರಿಯಾಯಿತಿ ಹಾಗೂ ಹೋಗುವ ಹಾಗೂ ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿದಲ್ಲಿ ೧೦% ರಿಯಾಯಿತಿ ನೀಡಲಾಗುತ್ತದೆ. ಆಗಸ್ಟ್ ೩೦ ಹಾಗೂ ೩೧ರಂದು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ೫೦೦ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement