ತಕ್ಷಣವೇ ಮನೆ, ಬೆಳೆ ಪರಿಹಾರ ವಿತರಿಸಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು : ಮಳೆ ಸಂತ್ರಸ್ತರಿಗೆ ವಿಳಂಬ ಮಾಡದೆ ತಕ್ಷಣವೇ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು, ಭಾನುವಾರ ಗೃಹ ಕಚೇರಿ ಕೃಷ್ಣಾದಿಂದ ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು.
ಕೆರೆಗಳು ಒಡೆಯದಂತೆ ಹಾಗೂ ಬಿರುಕು ಬೀಳದಂತೆ ಎಚ್ಚರಿಕೆ ವಹಿಸಬೇಕು. ಸಮೀಕ್ಷೆ ನಡೆಸಿ ಅಗತ್ಯವಿದ್ದೆಡೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳು ಈ ವೇಳೆ ಸೂಚಿಸಿದರು.

ಕಾಳಜಿ ಕೇಂದ್ರಗಳಲ್ಲಿರುವವರಿಗೆ ಗುಣಮಟ್ಟದ ಆಹಾರ ಹಾಗೂ ಬಂಧುಗಳ ಮನೆಗೆ ತೆರಲಿರುವವರಿಗೆ ಆಹಾರ ಕಿಟ್ ಗಳನ್ನು ತಲುಪಿಸುವಂತೆ ಸೂಚನೆ ನೀಡಿದರು. ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ಅಧಿಕಾರಿಗಳು ಸಂವಹನದ ಮೂಲಕ ಕಾರ್ಯನಿರ್ವಹಿಸಬೇಕು ಎಂದರು.
ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ಕಡಿತಗೊಂಡಿರುವ ವಿದ್ಯುತ್ ಸಂಪರ್ಕವನ್ನು ಸಕಾಲದಲ್ಲಿ ಮರುಸ್ಥಾಪಿಸಬೇಕು ಎಂದು ಸೂಚಿಸಿದರು.
ಸಚಿವರಾದ ಎಸ್.ಟಿ. ಸೋಮಶೇಖರ್, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಉಮೇಶ್ ಕತ್ತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಗಿರುವ ಹಾನಿಯ ಕುರಿತು ವಿವರಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಎಸ್‌ಐಆರ್‌-2026 ಅಂತಿಮ ಪಟ್ಟಿ ಪ್ರಕಟ ; ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement