ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ: ಮುರುಘಾ ಶರಣರ ಬಂಧನ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ  ಶರಣರನ್ನು ಪೋಕ್ಸೋ ಕಾಯ್ದೆಯಡಿ (POCSO case) ಚಿತ್ರದುರ್ಗ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್‌, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರು ಮಠದ ಒಳಗೆ ಪ್ರವೇಶಿಸಿ, ಪ್ರಕರಣ ದಾಖಲಾಗಿ 6 ದಿನಗಳ ನಂತರ ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಶ್ರೀಗಳನ್ನು ಬಂಧಿಸಿದ ಪೊಲೀಸರು ಶ್ರೀಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ.

ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಶ್ರೀಗಳ ವಿರುದ್ಧ ಪೊಲೀಸರು ಲುಕ್‌ಔಟ್‌ ನೋಟಿಸ್ ಜಾರಿ ಮಾಡಿದ ಬೆನ್ನಿಗೆ ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಆಗಸ್ಟ್‌ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು.ಮುರುಘಾ ಶರಣರ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ದೂರಿನ ಪ್ರಕಾರ, ಮಠವು ನಡೆಸುತ್ತಿರುವ ಶಾಲೆಯಲ್ಲಿ ಓದುತ್ತಿರುವ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರನ್ನು ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರಲ್ಲಿ ಒಬ್ಬ ದಲಿತ ಬಾಲಕಿಯಾಗಿರುವ ಕಾರಣ ಮಠಾಧೀಶರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಶ್ರೀಗಳ ವಿರುದ್ಧ ಪ್ರಕರಣ ದಾಖಲಾದ ನಂತರ ಮುರುಘಾ ಮಠದ ವಿದ್ಯಾರ್ಥಿಗಳನ್ನು ಸರ್ಕಾರಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿತ್ತು.
ಆಕ್ರೋಶದ ನಡುವೆಯೇ ಚಿತ್ರದುರ್ಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅಗತ್ಯವಿದ್ದರೆ, ಪಕ್ಕದ ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಪಡೆಗಳನ್ನು ಕರೆಸಲಾಗುತ್ತದೆ.
ಈ ಹಿಂದೆ, ಈ ಪ್ರಕರಣವು ತನ್ನ ವಿರುದ್ಧದ ದೀರ್ಘಾವಧಿಯ ಪಿತೂರಿಯ ಭಾಗವಾಗಿದೆ ಎಂದು ಸ್ವಾಮೀಜಿ ಹೇಳಿದ್ದರು, ಅಲ್ಲದೆ, ಈ ಪ್ರಕರಣದಲ್ಲಿ ಶುದ್ಧವಾಗಿ ಹೊರಬರುವುದಾಗಿ ಹೇಳಿದ್ದರು.ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಮಹಿಳಾ ವಾರ್ಡನ್ ಪೊಲೀಸರ ವಶದಲ್ಲಿದ್ದು, ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿನ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಹಾಗೂ ಮಠದ ಬಸವಾದಿತ್ಯ (ಮರಿಸ್ವಾಮಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಮಠದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರು ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement