ಭಾರತೀಯ ಗರ್ಭಿಣಿ ಪ್ರವಾಸಿ ಸಾವು: ಪೋರ್ಚುಗಲ್ ಆರೋಗ್ಯ ಸಚಿವರ ರಾಜೀನಾಮೆ

ಲಿಸ್ಬನ್: ಭಾರತೀಯ ಗರ್ಭಿಣಿ ಪ್ರವಾಸಿಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆಯಿಲ್ಲದೆ ಆಸ್ಪತ್ರೆಗಳ ನಡುವೆ ಸಾಗಾಟದ ಸಮಯದಲ್ಲಿ ಮೃತಪಟ್ಟ ನಂತರ ಪೋರ್ಚುಗಲ್‌ ನಲ್ಲಿ ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೋರ್ಚುಗಲ್‌ನ ಆರೋಗ್ಯ ಸಚಿವ ಮಾರ್ಟಾ ಟೆಮಿಡೊ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಇದನ್ನು ಪ್ರಧಾನ ಮಂತ್ರಿ ಅಂಗೀಕರಿಸಿದ್ದಾರೆ ಎಂದು ಪೋರ್ಚುಗಲ್‌ನ ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ, RTP ನ್ಯೂಸ್ ವರದಿ ಮಾಡಿದೆ. ಲಿಸ್ಬನ್‌ನಲ್ಲಿ ಭಾರತದ ಗರ್ಭಿಣಿ ಮಹಿಳೆಯ ಸಾವಿನ ಸುದ್ದಿಯ ಐದು ಗಂಟೆಗಳ ನಂತರ ಅವರು ರಾಜೀನಾಮೆ ಘೋಷಿಸಿದರು.
ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ 34 ವರ್ಷದ ಭಾರತೀಯ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಸಮಯದಲ್ಲಿ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಟೀಕೆಗೆ ಒಳಗಾದ ನಂತರ ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ.

31 ವಾರಗಳ ಗರ್ಭಿಣಿಯಾಗಿದ್ದ ಭಾರತೀಯ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಅಲ್ಲಿನ ಅತಿದೊಡ್ಡ ಆರೋಗ್ಯ ಸೌಲಭ್ಯಗಳಲ್ಲಿ ಒಂದಾದ ಸಾಂಟಾ ಮಾರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು. ಆದರೆ ಹೆರಿಗೆ ಹಾಗೂ ನವಜಾತ ಶಿಶುಗಳ ವಿಭಾಗ ತುಂಬಿದ್ದರಿಂದ ಗರ್ಭಿಣಿಯನ್ನು ಡಿ ಸಾಂಟಾ ಮರಿಯಾ ಆಸ್ಪತ್ರೆಯಿಂದ ಸಾವೊ ಫ್ರಾನ್ಸಿಸ್ಕೊ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಕರೆದೊಯ್ಯುವಾಗ ಮಾರ್ಗಮಧ್ಯೆ ಗರ್ಭಿಣಿ ಮಹಿಳೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.
ಪೋರ್ಚುಗಲ್‌ನಲ್ಲಿ ತುತರ್ತು ಹೆರಿಗೆ ಘಟಕಗಳು ಸ್ಥಗಿತಗೊಂಡಿದ್ದರಿಂದ ಇರುವ ಹೆರಿಗೆ ಘಟಕಗಳು ತುಂಬಿ ತುಳುಕುತ್ತಿರುವ ಕಾರಣ ಮಹಿಳೆಯರು ಗಂಟೆಗಟ್ಟಲೆ ಕಾಯಬೇಕಾಗಿದೆ. ಇಲ್ಲವೇ ಬೇರೆ ಆಸ್ಪತ್ರೆಗಳಿಗೆ ವರ್ಗಾವಣೆಯಾಗಬೇಕಾಗಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಲಸಿಕೆ ರೋಲ್‌ಔಟ್ ಅನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾರ್ಟಾ ಟೆಮಿಡೊ, ವೈದ್ಯರ ಕೊರತೆಯಿಂದಾಗಿ ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರ ಕೈಗೊಂಡ ನಂತರ ಭಾರೀ ಹಿನ್ನಡೆ ಎದುರಿಸಿದರು.
ಪೋರ್ಚುಗಲ್‌ನ ಲೂಸಾ ಸುದ್ದಿ ಸಂಸ್ಥೆ ಪ್ರಕಾರ, ಮಹಿಳೆಯ ಸಾವು ಟೆಮಿಡೋ ರಾಜೀನಾಮೆಗೆ ಕಾರಣವಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಪೋರ್ಚುಗಲ್‌ನಾದ್ಯಂತ ಇದೇ ರೀತಿಯ ಘಟನೆಗಳು ವರದಿಯಾಗಿವೆ, ಇದರಲ್ಲಿ ಎರಡು ಶಿಶುಗಳು ಸಾವಿಗೀಡಾದವು. ಅವರ ತಾಯಂದಿರು ಹಾಸಿಗೆ ಕೊರತೆಯಿಂದ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಗೊಂಡರು ಮತ್ತು ಇದು ಆರೋಗ್ಯ ಚಿಕಿತ್ಸೆಯ ದೀರ್ಘ ವಿಳಂಬಕ್ಕೆ ಕಾರಣವಾಯಿತು.
“ಡಾ. ಮಾರ್ಟಾ ಟೆಮಿಡೊ ಅವರು ನಡೆಸಿದ ಎಲ್ಲಾ ಕೆಲಸಗಳಿಗೆ ನಾನು ಕೃತಜ್ಞನಾಗಿದ್ದೇನೆ, ವಿಶೇಷವಾಗಿ ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಎದುರಿಸುವ ಅಸಾಧಾರಣ ಅವಧಿಯಲ್ಲಿ ಪೋರ್ಚುಗೀಸರಿಗೆ ಒದಗಿಸಲಾದ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ನಡೆಯುತ್ತಿರುವ ಸುಧಾರಣೆಗಳನ್ನು ಮುಂದುವರೆಸಿದ್ದಾರೆ ಎಂದು ಆಂಟೋನಿಯೊ ಕೋಸ್ಟಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement