ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ: ಬಸವಶ್ರೀ ಪ್ರಶಸ್ತಿ ವಾಪಸ್‌ ಮಾಡಿದ ಪತ್ರಕರ್ತ ಪಿ.ಸಾಯಿನಾಥ

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಶರಣರು ಪ್ರದಾನ ಮಾಡಿದ ಬಸವಶ್ರೀ ಪ್ರಶಸ್ತಿಯನ್ನು   ಮ್ಯಾಗಸ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಸಾಯಿನಾಥ್ ವಾಪಸ್‌ ಮಾಡುವುದಾಗಿ ತಿಳಿಸಿದ್ದಾರೆ.
ಡಾ.ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಬಂಧಿತರಾಗಿರುವ ಹಿನ್ನೆಲೆ ಪ್ರಶಸ್ತಿಯನ್ನು ಹಿಂದಿರುಗಿಸಲು ತೀರ್ಮಾನಿಸಿರುವುದಾಗಿ ಸಾಯಿನಾಥ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.ಪ್ರತಿವರ್ಷ ಚಿತ್ರದುರ್ಗದ ಮುರುಘಾ ಮಠದದಿಂದ ನೀಡುವ ಬಸವಶ್ರೀ ಪ್ರಶಸ್ತಿಯನ್ನು 2017ರಲ್ಲಿ ಸಾಯಿನಾಥ ಅವರಿಗೆ ಶ್ರೀಗಳು ಪ್ರದಾನ ಮಾಡಿದ್ದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪಗಳ ಕುರಿತು ಮಾಧ್ಯಮಗಳ ವರದಿಯಿಂದ ತಿಳಿದು ವಿಚಲಿತನಾಗಿದ್ದೇನೆ ಮತ್ತು ಮನಸ್ಸಿಗೆ ನೋವಾಯಿತು. ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯದ ಅಡಿಯಲ್ಲಿ ಶರಣರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಕೃತ್ಯವನ್ನು ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯರ ಜತೆ ನಾವಿದ್ದೇವೆ. ಅವರಿಗೆ ನ್ಯಾಯ ದೊರೆಯಬೇಕು ಎನ್ನುವ ಆಶಯದಿಂದ ಬಸವಶ್ರೀ ಪ್ರಶಸ್ತಿ ಮತ್ತು ಚೆಕ್‌ ಮೂಲಕ ನೀಡಲಾದ ₹5 ಲಕ್ಷ ಬಹುಮಾನ ಹಿಂತಿರುಗಿಸುತ್ತಿದ್ದೇನೆ. ಈ ಪ್ರಕರಣವನ್ನು ಬಹಿರಂಗಪಡಿಸಲು ಶ್ರಮಿಸಿದ ಮೈಸೂರಿನ ಸರ್ಕಾರೇತರ ಸಂಸ್ಥೆಯಾದ ಒಡನಾಡಿ ಕಾರ್ಯ ಶ್ಲಾಘನೀಯ. ಕರ್ನಾಟಕ ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ಹಂತದಲ್ಲೂ ರಾಜಿಯಾಗದೆಯೇ ಸಮಗ್ರ ತನಿಖೆ ನಡೆಸಬೇಕು’ ಎಂದು ಸಾಯಿನಾಥ ಒತ್ತಾಯಿಸಿದ್ದಾರೆ.
12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆ, ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಬಾನಾ ಆಜ್ಮಿ, ದಲೈಲಾಮಾ, ಬಲ್ಲಾದೀರ್ ಗದ್ದರ್, ಪಿ.ಟಿ ಉಷಾ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement