ಉನ್ನತ ಶಿಕ್ಷಣದಲ್ಲಿ ʼಪ್ರೋಫೆಸರ ಆಫ್ ಪ್ರಾಕ್ಟೀಸ್‌ʼ ಹೆಸರಲ್ಲಿ ಶೈಕ್ಷಣಿಕ ವಿದ್ಯಾರ್ಹತೆ ಇಲ್ಲದವರಿಗೆ ನೇರ ನೇಮಕಕ್ಕೆ ಒಪ್ಪಿಗೆ: ವಸಂತ ಲದವಾ ವಿರೋಧ

ಹುಬ್ಬಳ್ಳಿ: ವಿಶ್ವ ವಿದ್ಯಾಲಯ ಅನುದಾನ ಆಯೋಗ (UGC) ಆಗಸ್ಟ್‌ ತಿಂಗಳು ನಡೆದ ೫೬೦ನೇ ಸಭೆಯಲ್ಲಿ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಇರದಿದ್ದವರಿಗೂ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ನೇರ ನೇಮಕಾತಿಗೆ ಕರಡು ಮಾರ್ಗ ಸೂಚಿಗೆ ಅನುಮೋದನೆ ನೀಡಿದೆ. ಇದು ಅರ್ಹ ವಿದ್ಯಾವಂತರನ್ನು ಕಡೆಗಣಿಸುವ ಹಾಗೂ ಮೀಸಲಾತಿ ಮಾರ್ಗ ಸೂಚಿಗಳ ವಿರುದ್ಧದ ಕ್ರಮವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸಿನೆಟ್ ಮತ್ತು ಸಿಂಡಿಕೇಟ್ ಸದಸ್ಯ, ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಾಧ್ಯಾಪಕರ ನೇಮಕಾತಿಗೆ ಪಿ.ಎಚ್.ಡಿ. ಸಹಿತ ಇತರ ಶೈಕ್ಷಣಿಕ ವಿದ್ಯಾರ್ಹತೆ ಕಡ್ಡಾಯ. ಆದರೆ ಆಯೋಗ ಇದನ್ನು ಮೀರಿ ಒಟ್ಟು ಮಂಜೂರಾದ ಶೇಕಡಾ ೧೦ರಷ್ಟು ಜನರಿಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರದಿದ್ದರೂ ನೇರ ನೇಮಕಾತಿಗೆ ಮಾರ್ಗ ಸೂಚಿಗೆ ಅನುಮೋದನೆ ನೀಡಿದ್ದು ಅಸಂವಿಧಾನಿಕ ಮತ್ತು ಅರ್ಹ ಅಭ್ಯರ್ಥಿಗಳಿಗೆ ಮಾಡಿದ ಘೋರ ಅನ್ಯಾಯದ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಅತ್ಯುನ್ನತ ಮಟ್ಟ ಕಾಯ್ದುಕೊಳ್ಳವದಕ್ಕಾಗಿ ಧನ ಸಹಾಯ, ಅನುದಿನ ಸಲ್ಲಿಸುವ ಘನ ಉದ್ದೇಶದಿಂದ ಹಿಂದಿನ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂರವರ ವಿಶೇಷ ಮುಂದಾಲೋಚನೆ ಮತ್ತು ಮುತುವರ್ಜಿಯಿಂದ ಪ್ರತ್ಯೇಕ ಕಾನೂನು ರಚಿಸಿ ೧೯೫೬ರಲ್ಲಿ ವಿಶ್ಯವಿದ್ಯಾಲಯ ಅನುದಾನ ಆಯೋಗ ಅಸ್ತಿತ್ವಕ್ಕೆ ಬಂದಿತು. ಆದರೆ ಇಂದಿನ ಬಿಜೆಪಿ ಸರಕಾರ ಪೂರ್ವಾಪರ ಸಮಾಲೋಚಿಸದೆ, ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಇರದಿದ್ದರೂ “ಪ್ರೋಫೆಸರ ಆಫ್ ಪ್ರಾಕ್ಟೀಸ್‌” ಹೆಸರಲ್ಲಿ ನೇಮಕಾತಿಯ ಎಲ್ಲಾ ಕಾನೂನು, ರೀತಿ-ನಿತಿ ನಿಯಮಗಳನ್ನು ಗಾಳಿಗೆ ತೂರಿ ಒಟ್ಟು ಮಂಜೂರಾದ ಶೇಕಡಾ ೧೦ರಷ್ಟು ಪ್ರಾಧ್ಯಾಪಕರನ್ನು ನೇಮಿಸಿಕೊಳ್ಳುವಂಥ ಕ್ರಮ ಕೂಡಲೇ ಕೈಬಿಡಬೇಕೆಂದು ಯು.ಜಿ.ಸಿ. ಮತ್ತು ಕೇಂದ್ರ ಸರ್ಕಾರಕ್ಕೆ ವಸಂತ ಲದವಾ ಒತ್ತಾಯಿಸಿದ್ದಾರೆ.
ದೇಶದಲ್ಲಿ ಸುಮಾರು ಹದಿನಾಲ್ಕು ಲಕ್ಷಕ್ಕೂ ಮೀರಿ ವಿಶ್ವವಿದ್ಯಾಲಯ ಮತ್ತು ಮಹಾವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೨೦೧೯-೨೦ರ ವರದಿ ಪ್ರಕಾರ ಎರಡು ಲಕ್ಷ ಮೂರು ಸಾವಿರಕ್ಕೂ ಹೆಚ್ಚು ಪಿ.ಎಚ್.ಡಿ. ಪಡೆದ ಅಭ್ಯರ್ಥಿಗಳಿದ್ದಾರೆ, ದೇಶದಲ್ಲಿ ಮೂರರಲ್ಲಿ ಕೇವಲ ಒಂದು ಭಾಗದಷ್ಟು ಮಾತ್ರ ಪದವೀಧರರು ನಿಯಮಿತ ಸಂಬಳದ ಉದ್ಯೋಗದಲ್ಲಿದ್ದಾರೆ. ಉಳಿದ ಎರಡು ಭಾಗ ನಿರುದ್ಯೋಗಗಳು. ಇದರಲ್ಲಿ ಎಂ. ಫಿಲ್, ಸ್ನಾತಕೋತ್ತರರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯ ಅವಕಾಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಶೇಕಡಾ ೧೦ರಷ್ಟು ಹುದ್ದೆಗಳಿಗೆ ಯಾವುದೇ ಶೈಕ್ಷಣಿಯ ವಿದ್ಯಾರ್ಹತೆ ಪರಿಗಣಿಸದೆ ನೇರ ನೇಮಕಾತಿ ಪದ್ಧತಿ ಜಾರಿಗೆ ತಂದರೆ ಅರ್ಹರಿಗೆ ಭಾರಿ ಅನ್ಯಾಯವೆಸಗಿದಂತಾಗುತ್ತದೆ. ದೇಶದ ಸರ್ವೋಚ್ಛ ನ್ಯಾಯಾಲಯ ಇಂದಿರಾ, ಸಾಹ್ನಿ ಪ್ರಕರಣದಲ್ಲಿ ನೀಡಿದ ತೀರ್ಪಿನ ವಿರುದ್ಧದಲ್ಲಿ ಈ ಕ್ರಮ ಆಗಿದೆ. ಈ ತೀರ್ಪಿನ ಪ್ರಕಾರ ೫೦%ರಷ್ಟು ಹುದ್ದೆಗಳು ಮೀಸಲಾತಿಗೆ ಒಳಪಡಬೇಕಾಗುತ್ತದೆ. ಆದರೆ ಯುಜಿಸಿಯ ಈ ಪ್ರಸ್ತಾವನೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಯುಜಿಸಿಯ ೫೬೦ನೇ ಸಭೆಯಲ್ಲಿ ಮಂಜೂರಾದ ಕರಡು ಮಾರ್ಗಸೂಚಿ ಕೂಡಲೇ ರದ್ದುಪಡಿಸಬೇಕೆಂದು ವಸಂತ ಲದವಾ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement