ಶಿಕ್ಷಣ ಇಲಾಖೆ ಭ್ರಷ್ಟಾಚಾರದ ದೂರುಗಳ ತನಿಖೆಗೆ ಆಯೋಗ ರಚನೆಗೆ ಚಿಂತನೆ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ದೂರುಗಳನ್ನು ಸ್ವೀಕರಿಸಲು ಹಾಗೂ ತನಿಖೆ ನಡೆಸಲು ಪ್ರತ್ಯೇಕ ಆಯೋಗ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆಯೋಗ ರಚನೆ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಚರ್ಚಿಸಿದ ನಂತರ ಈ ಬಗ್ಗೆ ಅಂತಿಮ ರೂಪುರೇಷೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳ ಜಾಗಗಳನ್ನು ಕಬಳಿಸಲು ಹೊಂಚು ಹಾಕುತ್ತಿರುವ ಪ್ರಯತ್ನಗಳು ಹಲವೆಡೆ ನಡೆದಿವೆ. ಹೀಗಾಗಿ, ಈ ಜಾಗಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದು, ಆಸ್ತಿ ಸಂರಕ್ಷಣಾ ಅಭಿಯಾನ ನಡೆಸಲಾಗುತ್ತಿದೆ. ಈಗಾಗಲೇ ನಾಲ್ಕು ಸಾವಿರ ಶಾಲೆಗಳ ದಾಖಲೆಗಳನ್ನು ಕ್ರಮಬದ್ಧಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಶಿಕ್ಷಕರನ್ನೂ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಸಲಹೆ ಹಲವರಿಂದ ಬಂದಿದೆ. ಈ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement