ಹಿಜಾಬ್ ಪ್ರಕರಣ: ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಅವರಿಗೆ ಬೇಕಾದದ್ದು ಧರಿಸಿ ಬರಬಹುದೇ ಎಂದು ಅರ್ಜಿದಾರರಿಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ನಿಗದಿತ ಸಮವಸ್ತ್ರ ಇರುವಂತಹ ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಸ್ತ್ರಗಳನ್ನು ಧರಿಸಿ ಬರಬಹುದೇ ಎಂದು ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿಷೇಧಿಸಿದ್ದನ್ನು ಪ್ರಶ್ನಿಸಿದ್ದ ಮೇಲ್ಮನವಿದಾರರನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತು.
ಕಾಲೇಜುಗಳಿಗೆ ಸಮವಸ್ತ್ರವನ್ನು ಸೂಚಿಸುವಂತೆ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ಆದೇಶ ಶಿಕ್ಷಣ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಕೂಡ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಹೇಳಿತು.
ಶಿಕ್ಷಣ ಸಂಸ್ಥೆಯು ನಿಯಮವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತೀರಿ. ಹಾಗಾದರೆ, ವಸ್ತ್ರಸಂಹಿತೆಯನ್ನು ನಿಷೇಧಿಸುವ ಕಾನೂನು ಇಲ್ಲದಿರುವಾಗ ಸರ್ಕಾರದ ವಿಷಯದಲ್ಲಿ ಇದು ಹೇಗೆ? ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಅವರಿಗೆ ಬೇಕಾದದ್ದನ್ನು ತೊಡಬಹುದೇ?” ಎಂದು ನ್ಯಾಯಮೂರ್ತಿ ಗುಪ್ತಾ ಇಂದಿನ ವಿಚಾರಣೆಯ ಸಂದರ್ಭದಲ್ಲಿ ಕೇಳಿದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮವನ್ನು ಆಚರಿಸುವ ಹಕ್ಕು ಇದ್ದರೂ ವಸ್ತ್ರ ಸಂಹಿತೆ ರೂಪಿಸಲಾದ ಶಿಕ್ಷಣ ಸಂಸ್ಥೆಯೊಳಗೆ ಅದನ್ನು ತೆಗೆದುಕೊಂಡುಹೋಗಬಹುದೇ ಎಂಬುದು ಸಮಸ್ಯೆಯಾಗಿದೆ ಎಂದು ಪೀಠ ಹೇಳಿದೆ.
ನೀವು ಧಾರ್ಮಿಕ ಹಕ್ಕನ್ನು ಹೊಂದಿರಬಹುದು. ಸಮವಸ್ತ್ರದ ಬಗ್ಗೆ ಸೂಚಿಸಿರುವ ಶಿಕ್ಷಣ ಸಂಸ್ಥೆಯಲ್ಲಿ ನೀವು ಆ ಹಕ್ಕನ್ನು ಬಳಸಬಹುದೇ? ನೀವು ಹಿಜಾಬ್‌ ಅಥವಾ ಸ್ಕಾರ್ಫ್‌ ಧರಿಸಲು ಅರ್ಹರಿರಬಹುದು. ಆದರೆ ಸಮವಸ್ತ್ರ ಇರುವ ಶಿಕ್ಷಣ ಸಂಸ್ಥೆಯೊಳಗೆ ನೀವು ಆ ಹಕ್ಕನ್ನು ಚಲಾಯಿಸಬಹುದೇ. ಅವರು ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿಲ್ಲ. ಸರ್ಕಾರ ನೀವು ಸಮವಸ್ತ್ರದೊಡನೆ ಶಾಲೆಗೆ ಬನ್ನಿ ಎಂದು ಹೇಳುತ್ತಿದೆ ಎಂಬುದಾಗಿ ಪೀಠ ವಿವರಿಸಿತು. ಪ್ರಕರಣದ ಮೇಲ್ಮನವಿದಾರರೊಬ್ಬರ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆ ಮಂಡಿಸಿದ ವಾದ ಆಲಿಸಿದ ನಂತರ ನ್ಯಾಯಾಲಯ ಈ ಹೇಳಿಕೆಗಳನ್ನು ನೀಡಿತು.
ಹಿರಿಯ ವಕೀಲ ರಾಜೀವ್‌ ಧವನ್‌ ವಾದ ಮಂಡಿಸಿ ಇಸ್ಲಾಂಗೆ ಹಿಜಾಬ್‌ ಅಗತ್ಯವೇ ಅಥವಾ ಇಲ್ಲವೇ ಎಂಬ ಪ್ರಮುಖ ಪ್ರಶ್ನೆಯನ್ನು ಪ್ರಕರಣ ಎತ್ತುತ್ತದೆ. ಇದು ಈ ಹಿಂದೆ ವ್ಯವಹರಿಸದೇ ಇರುವ ಸಾಂವಿಧಾನಿಕ ಪ್ರಶ್ನೆಯಾಗಿದೆ ಎಂದರು.
ನಮ್ಮದು ಜಾತ್ಯತೀತ ದೇಶ ಎಂದು ಸಂವಿಧಾನ ಹೇಳುತ್ತದೆ. ಜಾತ್ಯತೀತ ರಾಷ್ಟ್ರದಲ್ಲಿ ಸರ್ಕಾರಿ ಸಂಸ್ಥೆಯಲ್ಲಿ ಧಾರ್ಮಿಕ ಬಟ್ಟೆಯನ್ನು ಧರಿಸಬೇಕು ಎಂದು ನೀವು ಹೇಳಬಹುದ .? ಎಂದು ನ್ಯಾ. ಹೇಮಂತ್‌ ಗುಪ್ತಾ ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಆಗ ಧವನ್‌ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳು ಪೇಟ ಧರಿಸಿರುವ ಚಿತ್ರದ ಬಗ್ಗೆ ಗಮನ ಸೆಳೆದರು. ಆದರೆ ಪೇಟವನ್ನು ಧಾರ್ಮಿಕ ಚಿಹ್ನೆಗೆ ಹೋಲಿಸಲಾಗದು ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.
ಸಮಸ್ಯೆ ಲಕ್ಷಾಂತರ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದ್ದು ಕಾನೂನಿನ ಗಣನೀಯ ಪ್ರಶ್ನೆ ಒಳಗೊಂಡಿರುವುದರಿಂದ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು” ಎಂದು ಧವನ್‌ ಕೋರಿದರು.
ಮತ್ತೊಬ್ಬ ಮೇಲ್ಮನವಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಂಜಯ್‌ ಹೆಗ್ಡೆ ಕರ್ನಾಟಕ ಸರ್ಕಾರದ ಆದೇಶ ಕರ್ನಾಟಕ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ ಎಂದರು. ಬಳಿಕ ಪ್ರಕರಣವನ್ನು ಉಡುಪಿಯ ಘಟನೆಗೆ ಸೀಮಿತವಾಗಿ ಪರಿಗಣಿಸಬೇಕು ಎಂದರು. ಪ್ರಕರಣಕ್ಕೆ ಕಾರಣವಾದ ಉಡುಪಿಯ ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್‌ ಕುರಿತು ನಡೆದ ಘಟನೆಗಳ ವಿವರವನ್ನು ನ್ಯಾಯಾಲಯಕ್ಕೆ ಅವರು ವಿವರಿಸಿದರು.
ಇಡೀ ಪ್ರಕರಣವನ್ನು ಶಾಸನಾತ್ಮಕ ಆಧಾರಗಳ ಹಿನ್ನೆಲೆಯಲ್ಲಿ ನೋಡಬೇಕೇ ಹೋರತು ಸಾಂವಿಧಾನಿಕ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪರಿಗಣಿಸಬಾರದು. ಸೂಚಿಸಲಾದ ಸಮವಸ್ತ್ರವನ್ನು ಧರಿಸಿಲ್ಲ ಎಂದಾಕ್ಷಣವೇ ಯಾರನ್ನಾದರೂ ಶಿಕ್ಷಣದಿಂದ ವಂಚಿತರನ್ನಾಗಿಸಲು ಸಾಧ್ಯವೇ?” ಎಂದು ಅವರು ವಾದಿಸಿದರು.

ನಂತರ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಶೈಕ್ಷಣಿಕ ಸಂಸ್ಥೆಯಲ್ಲಿ ಶಿಸ್ತು ಕಾಪಾಡುವ ವಿಚಾರ ನಮ್ಮ ಮುಂದಿದೆ. ಆದರೆ, ಅದನ್ನು ಪಾಲಿಸಲು ಅವರಿಗೆ ಇಷ್ಟವಿಲ್ಲ. ಧಾರ್ಮಿಕ ಆಚರಣೆಗಳನ್ನು ಮುಂದಿಟ್ಟು ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವಂತಿಲ್ಲ ಎಂದು ಅವರು ವಾದಿಸಿದರು.
ನಂತರ ಕರ್ನಾಟಕ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿ ಅವರು ಸರ್ಕಾರ ಆದೇಶ ಹೊರಡಿಸಲು ಕಾರಣವಾದ ಹಿನ್ನೆಲೆಯನ್ನು ವಿವರಿಸಿದರು. “ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿದ್ದರಿಂದ, ಯುವಕರು ಭಾಗ್ವಾ ಹಾಕಿಕೊಂಡು ಬಂದಿದ್ದರು. ಇದು ಶಿಕ್ಷಣ ಸಂಸ್ಥೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಇದನ್ನು ಉಲ್ಲೇಖಿಸಿ ಶಾಲಾ ಆಡಳಿತಗಳು ಸರ್ಕಾರಕ್ಕೆ ಪತ್ರ ಬರೆದಿದ್ದವು ಎಂದು ತಿಳಿಸಿದರು.
ಸಮವಸ್ತ್ರದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ಅವಕಾಶವಿದೆ. ಕೆಲವು ಸಂಸ್ಥೆಗಳು ಹಿಜಾಬ್‌ ನಿಷೇಧಿಸಿವೆ. ಆದರೆ, ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಆದರೆ, ಇಲ್ಲಿ ಸರ್ಕಾರ ಯಾವುದೇ ಹಕ್ಕನ್ನು ನಿಷೇಧಿಸಿಲ್ಲ ಎಂದು ಅವರು ಹೇಳಿದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಹಿಜಾಬ್‌ ಅನುಮತಿಸಲು ಇನ್ನೂ ಸ್ವಾತಂತ್ರ್ಯ ಇದೆಯೇ ಎಂದು ಪೀಠ ಪ್ರಶ್ನಿಸಿದಾಗ ನಾವದಗಿ ಅವರು ಹೌದು. ಅದಕ್ಕೆ ಅವರು ಅನುಮತಿಸಬಹುದಾಗಿದ್ದು, ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಸರ್ಕಾರಿ ಸಂಸ್ಥೆಗಳ ವಿಚಾರದಲ್ಲಿ ಏನಾಗುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಈ ವಿಚಾರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಲು ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಕಾಲೇಜಿನಂತೆ ಕೆಲವು ಕಡೆ ಹಿಜಾಬ್‌ಗೆ ಅನುಮತಿಸದೇ ಇರಲು ನಿರ್ಧರಿಸಲಾಗಿದೆ. ಆದರೆ, ಇಲ್ಲಿ ಅದನ್ನು ಪ್ರಶ್ನಿಸಲಾಗಿಲ್ಲ ಎಂದರು.
ಕ್ರೈಸ್ತರ ಶಾಲೆಗಳು ಹಿಜಾಬ್‌ಗೆ ಅನುಮತಿ ನೀಡುತ್ತವೆಯೇ ಎಂದು ಪೀಠ ಪ್ರಶ್ನಿಸಿದಾಗ ಇಲ್ಲ ಅವರು ಅನುಮತಿ ನೀಡುವುದಿಲ್ಲ ಎಂದು ಎಜಿ ಹೇಳಿದರು. ಆಗ ವಕೀಲ ಹೆಗ್ಡೆ ಆಕ್ಷೇಪಣೆಯಲ್ಲಿ ಇದೆಲ್ಲವನ್ನೂ ಎಜಿ ಅವರು ಉಲ್ಲೇಖಿಸಬೇಕು. ಅದನ್ನು ಉಲ್ಲೇಖಿಸದಿರುವುದರಿಂದ ಅದನ್ನು ಇಲ್ಲಿ ಅವರು ಪ್ರಸ್ತಾಪಿಸುವಂತಿಲ್ಲ ಎಂದು ವಾದಿಸಿದರು ಎಂದು ವರದಿ ತಿಳಿಸಿದೆ. ಪ್ರಕರಣದ ವಿಚಾರಣೆ ಸೆಪ್ಟೆಂಬರ್ 7 ರಂದು ಮುಂದುವರಿಯಲಿದೆ.

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement