ವಿಶ್ವಾಸ ಕೊಟ್ಟು ವಿಶ್ವಾಸ ಗಳಿಸಿದವರು ಡಾ.ನ.ವಜ್ರಕುಮಾರ: ಧಾರವಾಡದ ನುಡಿ-ನಮನ ಕಾರ್ಯಕ್ರಮದಲ್ಲಿ ಡಾ.ವೀರೇಂದ್ರ ಹೆಗ್ಗಡೆ

ಧಾರವಾಡ: ಜನತಾ ಶಿಕ್ಷಣ ಸಂಸ್ಥೆಯನ್ನು ಕಟ್ಟುವಲ್ಲಿ ಡಾ. ನ.ವಜ್ರಕುಮಾರ ಅವರ ಕಾರ್ಯ ಅದ್ಭುತವಾದದ್ದು ಮತ್ತು ಪ್ರಮುಖವಾದದ್ದು. ಇವತ್ತು ಅವರ ದೇಹ ನಮ್ಮ ಜೊತೆಗೆ ಇರದಿದ್ದರೂ, ಅವರ ಅಸ್ತಿತ್ವ, ವ್ಯಕ್ತಿತ್ವವನ್ನು ಈ ಸಂಸ್ಥೆಯ ಮೂಲಕ ಉಳಿಸಿ ಹೋಗಿದ್ದಾರೆ. ಅವರು ತಮ್ಮ ಕಾರ್ಯದಿಂದ ಜನಮನದಲ್ಲಿ ಅಜರಾಮರರಾಗಿದ್ದಾ ಎಂದು ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ಇಲ್ಲಿಯ ಜನತಾ ಶಿಕ್ಷಣ ಸಮಿತಿ ವತಿಯಿಂದ ‘ಸನ್ನಿಧಿ ಕಲಾಕ್ಷೇತ್ರ’ದಲ್ಲಿ ಬುಧವಾರ ಆಯೋಜಿಸಿದ್ದ ‘ಡಾ. ನ. ವಜ್ರಕುಮಾರ ಅವರ ನುಡಿ ನಮನ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧಾರವಾಡದ ಮುರುಘಾಮಠಕ್ಕೂ ಡಾ. ನ.ವಜ್ರಕುಮಾರ ಅವರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದ್ದುದನ್ನು ಮರೆಯುವಂತಿಲ್ಲ. ನಮ್ಮನ್ನು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ’ ಎಂದು ಹೇಳಿದರು.
ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ‘ವಜ್ರಕುಮಾರ ಅವರು ವಿಶ್ವಾಸವನ್ನು ಕೊಟ್ಟು, ವಿಶ್ವಾಸವನ್ನು ಪಡೆಯುತ್ತಿದ್ದರು. ಅವರೊಬ್ಬ ಕರ್ಮಯೋಗಿ. ತ್ಯಾಗ ಜೀವಿಗಳಾಗಿ, ಭಗವಂತನ ಸಾಕ್ಷಾತ್ಕಾರ ಪಡೆದ ಪುಣ್ಯ ಜೀವಿಯಾಗಿದ್ದರು. ಅವರ ಕಾರ್ಯವೈಖರಿ ಮೆಚ್ಚುವಂತಹದ್ದಾಗಿತ್ತು ಎಂದು ಹೇಳಿದರು.
ಜೆ.ಎಸ್.ಎಸ್. ಸಂಸ್ಥೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಂತಹ ವ್ಯಕ್ತಿತ್ವ ಅವರದ್ದು. ಈ ಸಂಸ್ಥೆಗೆ ಭದ್ರವಾದ ಅಡಿಪಾಯವನ್ನು ಹಾಕಿದ್ದಾರೆ. ಅವರ ಅಗಲಿಕೆ ನನಗೆ ವಯಕ್ತಿಕವಾಗಿ ನಷ್ಟ ಹಾಗೂ ದುಃಖವನ್ನುಂಟು ಮಾಡಿದೆ. ಇಡೀ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಾ ಇದ್ದದ್ದರಿಂದ ನನಗೆ ಯಾವುದೇ ಆತಂಕ ಇರಲಿಲ್ಲ. ವಜ್ರಕುಮಾರ ಅವರ ಋಣ ನನಗೆ ತೀರಿಸಲು ಸಾಧ್ಯವಿಲ್ಲ. ಅವರು ಹಾಕಿದ ಅಡಿಪಾಯದ ಮೇಲೆ ಇನ್ನಷ್ಟು ಉತ್ತರೋತ್ತರವಾಗಿ ಈ ಸಂಸ್ಥೆ ಬೆಳೆಯುವಂತೆ ಮಾಡಬೇಕಾದದ್ದು ಇಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ. ಅವರು ತೋರಿದ ದಾರಿಯಲ್ಲಿ ನಡೆಯೋಣ ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಮಾಜಿ ಸಭಾಪತಿಗಳು ಬಸವರಾಜ ಹೊರಟ್ಟಿ ಮಾತನಾಡಿ, ‘ಸಂಸ್ಥೆಯಿಂದ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಂಡು ಬಂದ ವ್ಯಕ್ತಿ ವಜ್ರಕುಮಾರ ಅವರಾಗಿದ್ದರು. ಸಂಸ್ಥೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಯಾವುದೇ ಸಮಸ್ಯೆ ಉದ್ಭವವಾಗದಂತೆ ನೋಡಿಕೊಂಡಿದ್ದರು. ಅವರು ನಮ್ಮಿಂದ ಭೌತಿಕವಾಗಿ ಅಗಲಿದ್ದರೂ, ನಮ್ಮ ಜೊತೆ ಮಾನಸಿಕವಾಗಿ ಇದ್ದೇ ಇದ್ದಾರೆ. ಅವರ ತ್ಯಾಗ ಅಪಾರವಾದ್ದು. ಯಾಕೆಂದರೆ ಅವರು, ಇಡೀ ರಾಜ್ಯಕ್ಕೆ ಮಾದರಿಯಾದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಪ್ರತಿಯೊಂದು ತರಗತಿಯಲ್ಲಿ ಅವರ ಭಾವಚಿತ್ರ ಹಾಕುವುದು ಅಗತ್ಯವಾಗಿದ್ದು, ಅವರ ಆದರ್ಶ ವ್ಯಕ್ತಿತ್ವ, ಶ್ರಮ, ಸಮಯ ಪರಿಪಾಲನೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ’ ಎಂದರು.
ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಮಾತನಾಡಿ, ‘ವಜ್ರಕುಮಾರ ಅವರು ಧರ್ಮಸ್ಥಳದಿಂದ ಪ್ರತಿಭೆಯಾಗಿ ಬರಲಿಲ್ಲ, ಕ್ಷೇತ್ರದ ಪ್ರತಿರೂಪವಾಗಿ ಬಂದರು. ಜನತಾ ಶಿಕ್ಷಣ ಸಮಿತಿಯ ಜವಾಬ್ದಾರಿಯನ್ನು ಅತ್ಯಂತ ಪರಿಪೂರ್ಣವಾಗಿ ನಿಭಾಯಿಸಿದರು. ಶಿಸ್ತಿನ ಸಿಪಾಯಿಯಾಗಿದ್ದರು. ವಜ್ರಕುಮಾರ ಅವರು ಹೆಸರಿಗೆ ತಕ್ಕಂತೆ ವಜ್ರದಷ್ಟೇ ಕಠಿಣವಾಗಿದ್ದರೂ, ಅವರ ಮನಸ್ಸು ಮಾತ್ರ ಹೂವಿನ ಹಾಗೆ ಮೃದುವಾದದ್ದು. ಅವರು ಚಿತ್ರಕಲೆ, ಸಂಗೀತ, ನಾಟಕ ಹೀಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕ್ಷೇತ್ರಕ್ಕೂ ಕೂಡ ಮಹತ್ವವನ್ನು ನೀಡುತ್ತಿದ್ದರು. ಅವರು ಉತ್ತರ ಕರ್ನಾಟಕವನ್ನು ಮಾತ್ರ ಗೆಲ್ಲಲಿಲ್ಲ. ಇಡೀ ಧರ್ಮಸ್ಥಳವನ್ನೇ ಗೆದ್ದರು. ಈ ಭಾಗದ ಜನರು ಧರ್ಮಸ್ಥಳವನ್ನು ಪ್ರತಿಕ್ಷಣ ನೆನೆಯುವಂತೆ ಮಾಡಿದ್ದಾರೆ. ಧರ್ಮಸ್ಥಳದಲ್ಲಿರುವ ನ್ಯಾಯ, ನೀತಿ, ನಿಷ್ಠೆಗಳನ್ನು ಧಾರವಾಡದ ನೆಲದಲ್ಲಿಯೂ ಬಿತ್ತುವಂತಹ ಕೆಲಸ ಮಾಡಿದ್ದಾರೆ. ಅವರು ತಮ್ಮ ಸಾಧನೆ ಮಾದರಿಯನ್ನು ನಮಗಾಗಿ ಉಳಿಸಿ ಹೋಗಿದ್ದಾರೆ’ ಎಂದು ಹೇಳಿದರು.

ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ, ‘ವಜ್ರಕುಮಾರ ಅವರು ೧೯೭೩ ರಿಂದ ತಮ್ಮ ಕೊನೆಯ ದಿನಗಳವರೆಗೆ ಸಂಸ್ಥೆಯ ಹಿತಾಸಕ್ತಿಗಾಗಿ ಮಿಡಿದವರಾಗಿದ್ದರು. ಇಡೀ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಿದ ಪ್ರಮುಖ ವ್ಯಕ್ತಿಗಳಾಗಿದ್ದರು. ಅವರ ಸಾಧನೆ ನಮಗೆ ದಾರಿ ದೀಪ. ಅವರ ಎಲ್ಲ ಈ ಸಾಧನೆಯ ಜೊತೆಗೆ ಅವರ ಪತ್ನಿ ಸುಮನಾ ವಜ್ರಕುಮಾರ ಅವರ ಸಹಕಾರ, ತ್ಯಾಗ ಕೂಡಾ ತುಂಬಾ ಇದೆ. ವಜ್ರಕುಮಾರ ಅವರಿಗೆ ಹುಬ್ಬಳ್ಳಿ-ಧಾರವಾಡ ನಾಗರಿಕ ಸನ್ಮಾನ ಆಯೋಜಿಸಿದಾಗ, ವಜ್ರಕುಮಾರ ಅವರು, ‘ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರಿಸಿದ ಬಿಳಿ ಬಟ್ಟೆಯ ಮೇಲೆ ಒಂದು ಕಪ್ಪು ಚುಕ್ಕೆ ಬೀಳದಂತೆ ನಾನು ಬದುಕುತ್ತೇನೆ’ ಎಂಬ ಮಾತನ್ನು ಹೇಳಿದ್ದರು ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ವಜ್ರಕುಮಾರ ಅವರು ಅದೇ ರೀತಿಯಾಗಿ ಬದುಕಿದವರು. ಎಲ್ಲ ವರ್ಗದ ನೌಕರದಾರರನ್ನು ಸಮಾನ ದೃಷ್ಠಿಯಿಂದ ನೋಡಿದರು. ಸಾವಿರಾರು ಕುಟುಂಬಗಳಿಗೆ ಅನ್ನದಾತರಾದ ಡಾ. ನ.ವಜ್ರಕುಮಾರ ಅವರ ಅಗಲಿಕೆ ಸಂಸ್ಥೆಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ನಷ್ಟವನ್ನುಂಟು ಮಾಡಿದೆ’ ಎಂದರು.
ಮೇದಿಕೆಯ ಮೇಲೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನಕುಮಾರ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜೀವಂದರ ಕುಮಾರ, ಜೆ.ಎಸ್.ಎಸ್. ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಂ.ಎನ್. ತಾವರಗೇರಿ, ಕಮಲ ಮೆಹತಾ, ಸುಧೀರ ಕುಸನಾಳೆ ಇದ್ದರು.
ನುಡಿನಮನ ಕಾರ್ಯಕ್ರಮದಲ್ಲಿ ಅನೇಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಅಭಿಮಾನಿಗಳು, ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಮಾಧ್ಯಮದ ಪ್ರತಿನಿಧಿಗಳು ಡಾ. ನ.ವಜ್ರಕುಮಾರ ಅವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿದರು.
ಪಲ್ಲವಿ ಖಾನಪೇಟ್ ಗೀತ ಗಾಯನ ಮಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement