ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ತೋಟದ ಮನೆಯಲ್ಲಿ ಬುಧವಾರ ಸಂಜೆ ನೆರವೇರಿತು.
ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಧಾರ್ಮಿಕ ಪದ್ಧತಿಯಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಅಂತಿಮ ವಿಧಿವಿಧಾನ ಬೆಲ್ಲದ ಬಾಗೇವಾಡಿ ಗ್ರಾಮದ ಮಹಾಂತ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಸಲಾಯಿತು. ಈ ವೇಳೆ ಅಷ್ಟದಿಕ್ಕುಗಳಲ್ಲಿ ಪೂರ್ಣಕುಂಭ ಇಟ್ಟು ಪೂಜೆ ನೆರವೇರಿಸಲಾಯಿತು. ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಉಮೇಶ ಕತ್ತಿಯವರನ್ನು ಸಮಾಧಿ ಮಾಡಲಾಯಿತು. ಪುತ್ರ ನಿಖಿಲ್ ಅಂತಿಮ ವಿಧಿವಿಧಾನ ನೆರವೇರಿಸಿದರು.

ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಆರ್. ಅಶೋಕ್, ಮುನಿರತ್ನ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲು ಸೇರಿದಂತೆ ಹಲವು ರಾಜಕೀಯ ನಾಯಕರು, ಉತ್ತರ ಕರ್ನಾಟಕದ ಪ್ರಮುಖ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನಹೊಂದಿದ ಸಚಿವ ಉಮೇಶ ಕತ್ತಿ (61) ಅವರನ್ನು ಬುಧವಾರ ಬೆಳಗ್ಗೆ ಏರ್‌ಲಿಫ್ಟ್‌ ಮೂಲಕ ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲಾಯಿತು. ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬಳಿಕ ಅಲ್ಲಿಂದ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಕಾರ್ಖಾನೆ ಆವರಣಕ್ಕೆ ಶಿಫ್ಟ್ ಮಾಡಲಾಯಿತು.
ಬೆಳಗಾವಿ ಮಿಲಿಟರಿಯ ತೆರೆದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮುಖಾಂತರ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಕಾರ್ಖಾನೆಯ ಆವರಣಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಲ್ಲಿಂದ ಬೆಲ್ಲದ ಬಾಗೇವಾಡಿಯ ಉಮೇಶ ಕತ್ತಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮನೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿ ಬಳಿಕ ಅಂತಿಮ ಯಾತ್ರೆ ನಡೆಯಿತು. ಉಮೇಶ್ ಕತ್ತಿ ನಿವಾಸದಿಂದ ತೋಟದವರೆಗೂ ಅಂತಿಮ ಯಾತ್ರೆ ಮೂಲಕ ಸಾಗಿ ಬಳಿಕ ರಾತ್ರಿ 9:40ರ ಸುಮಾರಿಗೆ ಸುಮಾರಿಗೆ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement