
ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಕಾರ್ಯಕರ್ತರಿಗೆಂದು ಅಮಿತ್ ಶಾ ಅವರ ವ್ಯಂಗ್ಯಚಿತ್ರವಿರುವ ಟಿ-ಶರ್ಟ್ ವಿನ್ಯಾಸಗೊಳಿಸಿದೆ.
ಟಿ-ಶರ್ಟ್‌ನಲ್ಲಿ ಅಮಿತ್ ಶಾ ಅವರ ವ್ಯಂಗ್ಯಚಿತ್ರವಿದ್ದು ಅದರ ಕೆಳಗೆ ‘ಭಾರತದ ಅತಿದೊಡ್ಡ ಪಪ್ಪು’ ಎಂದು ಬರೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ‘ಪಪ್ಪು’ ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡುತ್ತಿತ್ತು. ಸದ್ಯ ಟಿಎಂಸಿ, ಅಮಿತ್ ಶಾ ಅವರನ್ನು ಅದೇ ಹೆಸರಿನಿಂದ ಕರೆಯುವ ಮೂಲಕ ಅಣಕ ಮಾಡಲು ಮುಂದಾಗಿದೆ.

ಪಶ್ಚಿಮ ಬಂಗಾಳದ ವಿವಿಧೆಡೆ ನಡೆಯಲಿರುವ ದುರ್ಗಾ ಪೂಜೆಯ ಸಂದರ್ಭದಲ್ಲೇ ಈ ಪ್ರಚಾರ ಆಂದೋಲನ ನಡೆಸಲು ಪಕ್ಷ ಸಿದ್ಧತೆ ನಡೆಸಿದೆ.ಅಪಹಾಸ್ಯ ಅಥವಾ ಅಣಕ ಸಂವಹನದ ಪ್ರಮುಖ ವಿಧ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಂದ ಈ ರೀತಿಯ ಅಣಕ ಆರಂಭವಾಯಿತು. ಜಾಲತಾಣದಲ್ಲಿ ಇದು ಜನಪ್ರಿಯವಾಯಿತು.
ಈಗ ಇದೇ ಟಿ- ಶರ್ಟ್ ರೂಪ ಪಡೆದಿದೆ. ಮೊದಲಿಗೆ ಆನ್‌ಲೈನ್‌ನಲ್ಲಿ ಶರ್ಟುಗಳು ಲಭ್ಯವಿದ್ದವು. ಈಗ ಸಗಟು ಮಾರುಕಟ್ಟೆಯಲ್ಲೂ ಲಭ್ಯವಿವೆ’ ಎಂದು ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್ ಓಬ್ರಿಯಾನ್ ಹೇಳಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಕಾರ್ಯಕರ್ತರು ಈ ಟಿ-ಶರ್ಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ