ತೆಲುಗು ಸಿನೆಮಾ ‘ರೆಬೆಲ್ ಸ್ಟಾರ್’ ಕೃಷ್ಣಂ ರಾಜು ನಿಧನ

ಹೈದರಾಬಾದ್‌: ಹಿರಿಯ ತೆಲುಗು ನಟ ಉಪ್ಪಲಪತಿ ಕೃಷ್ಣಂ ರಾಜು ಅವರು ಸೆಪ್ಟೆಂಬರ್ 11 ರ ಭಾನುವಾರದ ಮುಂಜಾನೆ 83 ನೇ ವಯಸ್ಸಿನಲ್ಲಿ ನಿಧನರಾದರು.
ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಟ ಪ್ರಭಾಸ್ ಅವರ ದೊಡ್ಡಪ್ಪ. ಟಾಲಿವುಡ್‌ನ ‘ರೆಬೆಲ್ ಸ್ಟಾರ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣಂ ರಾಜು ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ 180ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣಂ ರಾಜು ಅವರು ಸಾಮಾಜಿಕ, ಕೌಟುಂಬಿಕ, ರೋಮ್ಯಾಂಟಿಕ್ ಮತ್ತು ಥ್ರಿಲ್ಲರ್ ಚಲನಚಿತ್ರಗಳಿಂದ ಹಿಡಿದು ಐತಿಹಾಸಿಕ ಮತ್ತು ಪೌರಾಣಿಕ ಚಲನಚಿತ್ರಗಳ ವರೆಗೂ ಎಲ್ಲ ಮಾದರಿಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಯಶಸ್ವಿ ಚಲನಚಿತ್ರಗಳು ಅಮರ ದೀಪಂ, ಸೀತಾ ರಾಮುಲು, ಕಟಕಟಾಲ ರುದ್ರಯ್ಯ ಮತ್ತು ಇನ್ನೂ ಅನೇಕ. ನಟನ ಕೊನೆಯ ಆನ್-ಸ್ಕ್ರೀನ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರದಲ್ಲಿ ನಟಿಸಿದ್ದರು.

ಜನವರಿ 20, 1940 ರಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಜನಿಸಿದ ಕೃಷ್ಣಂ ರಾಜು 1966 ರಲ್ಲಿ ಚಿಲಕಾ ಗೋರಿಂಕಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವು ಚಲನಚಿತ್ರಗಳಲ್ಲಿ ಖಳ ನಾಯಕನಾಗಿಯೂ ನಟಿಸಿದ್ದಾರೆ. ನಂತರ ಭಕ್ತ ಕಣ್ಣಪ್ಪ, ತಂದ್ರಾ ಪಾಪರಾಯುಡು ಸಿನಿಮಾಗಳ ಮೂಲಕ ಕೃಷ್ಣಂ ರಾಜು ಹಿಂದಿನ ಅವಿಭಜಿತ ಆಂಧ್ರಪ್ರದೇಶದ ಮನೆಮಾತಾಗಿದ್ದರು. ಅವರು ತಮ್ಮ ನಿರ್ಮಾಣದ ಬ್ಯಾನರ್ ಗೋಪಿ ಕೃಷ್ಣ ಮೂವೀಸ್ ಅಡಿಯಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

ಅವರ ನಂತರದ ವರ್ಷಗಳಲ್ಲಿ, ಚಲನಚಿತ್ರಗಳ ಜೊತೆಗೆ, ಕೃಷ್ಣಂ ರಾಜು ರಾಜಕೀಯದಲ್ಲಿಯೂ ವೃತ್ತಿಜೀವನವನ್ನು ಅನುಸರಿಸಿದರು. 1991ರಲ್ಲಿ ನರಸಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 1999ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು 2004ರ ವರೆಗೆ ವಾಜಪೇಯಿ ಸಂಪುಟದಲ್ಲಿ ಜೂನಿಯರ್‌ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿಯನ್ನು ಎರಡು ಬಾರಿ ಪಡೆದಿದ್ದ ಕೃಷ್ಣಂ ರಾಜು 1986 ರಲ್ಲಿ ತಂದ್ರಾ ಪಾಪರಾಯುಡುಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅವರಿಗೆ 2006 ರಲ್ಲಿ ಫಿಲ್ಮ್‌ಫೇರ್ ಸೌತ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕೂಡ ಕೃಷ್ಣಂ ರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜಗನ್ ತೆಲುಗು ಚಿತ್ರರಂಗಕ್ಕೆ ನಟನ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ದುಃಖಿತ ಕುಟುಂಬ ಸದಸ್ಯರಿಗೆ ತಮ್ಮ ಸಂತಾಪವನ್ನು ತಿಳಿಸಿದರು. ತೆಲುಗು ಚಿತ್ರರಂಗದ ಸದಸ್ಯರು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement