ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ

ಬೆಂಗಳೂರು: ಇಂದಿನಿಂದ (ಸೆಪ್ಟಂಬರ್‌ 12) ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಸೆಪ್ಟಂಬರ್‌ 23 ರವರೆಗೆ ನಡೆಯಲಿದೆ. ಮೊದಲ ದಿನದಿಂದಲೇ ಅಧಿವೇಶನ ಕಾವೇರುವ ಸಾಧ್ಯತೆಯಿದೆ.
ಕೆಲವು ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಆಡಳಿತ ಪಕ್ಷ ಮುಂದಾಗಲಿದೆ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ, ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸುವ ಮಸೂದೆ, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಯಾಗಬಹುದು.
ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಜನರಿಗಾದ ಸಂಕಷ್ಟ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅವಾಂತರ, ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಲಂಚದ ಆರೋಪ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಜ್ಜಾಗಿವೆ. ಇದಕ್ಕೆ ತಕ್ಕ ಪ್ರತ್ಯುಕತ್ತರ ನೀಡಲು ಬಿಜೆಪಿಯೂ ಸಿದ್ಧತೆ ನಡೆಸಿದೆ.

ಪಿಎಸ್‌ಐ ನೇಮಕಾತಿ, ಕೆಪಿಟಿಸಿಎಲ್‌ ನೇಮಕಾತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ನಡೆದ ಪರೀಕ್ಷೆಯ ಅಕ್ರಮಗಳು ಭಾರೀ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ನಡೆಯುತ್ತಿದ್ದು, ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‌ ಪೌಲ್‌ ಸೇರಿ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಅವಾಂತರದ ವಿಷಯವೂ ಚರ್ಚೆಗೆ ಬರಲಿದೆ. ಪಠ್ಯಪುಸ್ತಕದಲ್ಲಿನ ಹಲವು ವಿಷಯಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಚರ್ಚೆ ನಡೆಯುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಭಾರಿ ಮಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತ ಸಂಭವಿಸದೆ. ರಾಜಧಾನಿಯ ಕೆಲಭಾಗಗಳಲ್ಲಿ ಮಳೆಯಿಂದ ನೀರು ಸಲೀಸಾಗಿ ಹೋಗಲು ಸ್ಥಳವಿಲ್ಲದೆ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಸಜ್ಜಾಗಿವೆ. ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಆಧಾರಿತ ಹತ್ಯೆಗಳ ವಿಷಯವೂ ಪ್ರಸ್ತಾಪವಾಗಬಹುದಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement